ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹ

bjp
Published on


ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಶೀಘ್ರ ಚುನಾವಣೆ
ನಡೆಯಲಿದ್ದು ಅಭ್ಯರ್ಥಿ ಆಯ್ಕೆ ಸಂಬಂಧಿಸಿ ಗುರುವಾರ ನಗರದ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತ್ರತ್ವದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು. ವಿಧಾನ ಪರಿಷತ್‌ನಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿದೆ.
ಉಭಯ ಜಿಲ್ಲೆಗಳ ಬಿಜೆಪಿ ಶಾಸಕರು, ಮಾಜಿ ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಅಧ್ಯಕ್ಷರು ಸಹಿತ ಒಟ್ಟು 66 ಮಂದಿ ಸಭೆಗೆ ಅಪೇಕ್ಷಿತರಾಗಿದ್ದರು. 3-4 ಮಂದಿ ಹೊರತು ಪಡಿಸಿ ಉಳಿದ ಎಲ್ಲ ಅಪೇಕ್ಷಿತರು ಸಭೆಗೆ ಹಾಜರಾಗಿದ್ದರು.
ದ.ಕ-ಉಡುಪಿ ವಿಧಾನ ಪರಿಷತ್ ಕ್ಷೇತ್ರದ ಉಸ್ತುವಾರಿ ಬಸವರಾಜ್ ಬೊಮ್ಮಾಯಿ ಮತ್ತು ಸಹ ಉಸ್ತುವಾರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರಿಂದ ವೈಯಕ್ತಿಕ ಅಭಿಪ್ರಾಯ ಪಡೆದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ , ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮುಂತಾದವರು ಉಪಸ್ಥಿತರಿದ್ದರು.
ಮುಂದಿನ ಅಭ್ಯರ್ಥಿ ಯಾರಾಗ ಬೇಕು ಎನ್ನುವ ಬಗ್ಗೆ ಬಹುತೇಕ ಮಂದಿ ತಮ್ಮ ಅಭಿಪ್ರಾಯ ತಿಳಿಸಿದರೆ, ಕೆಲವರು ಮಾತ್ರ ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುವ ಅಭಿಪ್ರಾಯ ತಿಳಿಸಿದ್ದಾರೆ ಎನ್ನುವ ಮಾಹಿತಿ ಇದೆ.
.............................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net