ಕಾಂಗ್ರೆಸ್​ ಆಡಳಿತದಲ್ಲಿ ಜೀವಕ್ಕೆ ಗ್ಯಾರೆಂಟಿಯಿಲ್ಲ: ಕೋಟ

udp-14-kota
Published on

ಉಡುಪಿ: ಗ್ಯಾರೆಂಟೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಪಕ್ಷದ ಆಡಳಿತದಲ್ಲಿ ಜೀವಕ್ಕೆ ಗ್ಯಾರೆಂಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮೇಶ್ವರಂ ಕೆೆನಲ್ಲಿ ಬಾಂಬ್​ ಸ್ಫೋಟಿಸಿದ ಆರೋಪಿಗಳನ್ನು ಬಂಧನ ಮಾಡುವ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ. ಭಯೋತ್ಪಾದಕರು ರಾಜಾರೋಷವಾಗಿ ನಡುರಸ್ತೆಯಲ್ಲಿ ತಿರುಗಾಡುವಂತಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾತಂತ್ರದ ದೇಗುಲ ವಿಧಾನಸಭೆಯಲ್ಲಿ ಪಾಕ್​ಪರ ಘೋಷಣೆ ಕೂಗಿದ್ದರೂ ಎ್​ ಎಸ್​ ಎಲ್​ ವರದಿ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ನಿಖರವಾದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 10.50 ಲಕ್ಷ ಕುಟುಂಬಗಳಿಗೆ ಇನ್ನೂ ಮೊದಲ ತಿಂಗಳ ಗೃಹಲಕ್ಷಿ ಯೋಜನೆ ಹಣ ತಲುಪಿಲ್ಲ. ಯುವನಿಧಿ ಯೋಜನೆ 2022&23ರಲ್ಲಿ ಪಾಸಾದವರಿಗೆ ಮಾತ್ರ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ನೀಡುತ್ತಿರುವ 22 ಲಕ್ಷ ಕ್ಲಿಂಟಾಲ್​ ಅಕ್ಕಿಯನ್ನು ವಿತರಿಸಿ, ನಮ್ಮದೇ ಅನ್ನಭಾಗ್ಯ ಎಂದು ಕಾಂಗ್ರೆಸ್​ ಸುಳ್ಳು ಹೇಳುತ್ತಿದೆ. ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್​ ಸರ್ಕಾರ ಜನತೆಗೆ ಮೋಸ ಮಾಡುತ್ತಿದೆ ಎಂದವರು ಆರೋಪಿಸಿದರು.

ಬಿಜೆಪಿಗೆ ದೊಡ್ಡ ಅಂತರದ ಗೆಲುವು
ಗ್ರಾಪಂ, ತಾಪಂ, ಜಿಪಂ ಸದಸ್ಯನಾಗಿ, 4 ಬಾರಿ ವಿಧಾನ ಪರಿಷತ್​ ಸದಸ್ಯ, 3 ಬಾರಿ ಸಚಿವ, 2 ಬಾರಿ ವಿಪಕ್ಷ ನಾಯಕ, ಪಕ್ಷದಲ್ಲಿ ಜಿಲ್ಲೆ, ರಾಜ್ಯ ಪದಾಧಿಕಾರಿಯಾಗಿ ಜನರ ಮಧ್ಯೆ ಕೆಲಸ ಮಾಡುವ ಅವಕಾಶ ಪಕ್ಷ ನೀಡಿದೆ. ಲೋಕಸಭಾ ಕ್ಷೇತ್ರದಲ್ಲಿ 1838 ಮತಗಟ್ಟೆಗಳು, 445 ಶಕ್ತಿ ಕೇಂದ್ರಗಳು, 51 ಮಹಾಶಕ್ತಿ ಕೇಂದ್ರ ಸಹಿತ ತಳಹಂತದಲ್ಲಿ 25 ರಿಂದ 30 ಸಾವಿರ ಕಾರ್ಯಕರ್ತರ ಪಡೆ ಇದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಸಮೃದ್ಧ ಭಾರತ ಸಮರ್ಥ ಭಾರತಕ್ಕೆ ಒತ್ತು ಕೊಟ್ಟು ಕೆಲಸ ಮಾಡುತ್ತೇವೆ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಜನರ ಮುಂದಿಟ್ಟು ಮತ ಕೇಳುತ್ತೇನೆ. ಹಿಂದುತ್ವ ನಮ್ಮ ಅಜೆಂಡಾ, ಅಭಿವೃದ್ಧಿ ನಮ್ಮ ಮಂತ್ರ, ಹಿಂದಿನ ಬಾರಿಗಿಂತಲೂ ಹೆಚ್ಚು, ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತೇನೆ. ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ದೇಶದ ಪ್ರದಾನಿಯಾಗಬೇಕು ಎಂದು ಜನ ಬಯಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ, ಶಾಸಕರಾದ ಕಿರಣ್​ ಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ಮುಖಂಡರಾದ ಮಟ್ಟಾರ್​ ರತ್ನಾಕರ ಹೆಗ್ಡೆ, ಕುತ್ಯಾರು ನವೀನ್​ ಶೆಟ್ಟಿ, ದಿನಕರ ಬಾಬು, ರೇಶ್ಮಾ ಉದಯ ಶೆಟ್ಟಿ, ಸಂಧ್ಯಾ ರಮೇಶ್​, ಪೃಥ್ವಿರಾಜ್​ ಶೆಟ್ಟಿ, ವಿಜಯ ಕೊಡವೂರು, ವಿಜಯಕುಮಾರ್​ ಉದ್ಯಾವರ, ಶಿಲ್ಪಾ ಜಿ.ಸುವರ್ಣ, ರಾವೇಂದ್ರ ಕಿಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net