

ಕಾರವಾರ: ಸಾಮಾನ್ಯವಾಗಿ ರಾಜಕಾರಣಿಗಳು ಎಂದರೆ ಸಾಲಗಾರರಾಗಿರುತ್ತಾರೆ. ನೂರಾರು ಕೋಟಿ ಆಸ್ತಿ ಒಡೆಯರ ಹೆಸರಿನಲ್ಲೂ ಸಾಲವಿರುವುದು ಸಾಮಾನ್ಯ. ಆದರೆ, ಒಂದೇ ಒಂದು ಪೈಸೆ ಸಾಲ ಮಾಡದೇ ಇರುವವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ. ಬದಲಾಗಿ ಅವರು ಶಿರಸಿಯ ದೀನದಯಾಳ ಟ್ರಸ್ಟ್ಗೆ 24.50 ಲಕ್ಷ ರೂ. ಕೈಗಡ ಸಾಲ ನೀಡಿದ್ದಾರೆ.
ಶುಕ್ರವಾರ ನಾಮಪತ್ರದ ಜತೆಗೆ ಅವರು ಅಫಿಡವಿಟ್ ಸಲ್ಲಿಸಿದ್ದು, ಅವರ ಕುಟುಂಬವು ಒಟ್ಟು 16.76 ಕೋಟಿ ರೂ. ಆಸ್ತಿಯನ್ನು ಹೊಂದಿದೆ. ಕಳೆದ 10 ತಿಂಗಳಲ್ಲಿ ಅವರ ಕುಟುಂಬದ ಆಸ್ತಿಯ ಮೌಲ್ಯವು 46 ಲಕ್ಷ ರೂ. ಹೆಚ್ಚಳವಾಗಿದೆ. 2023 ರಲ್ಲಿ ಕಾಗೇರಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾಗ ತಮ್ಮ ಕುಟುಂಬದ ಆಸ್ತಿ 16.30 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು.
ಕಾಗೇರಿ ಅವರ ಬಳಿ 1 ಕಾರು 1 ಸ್ಕೂಟರ್ ಮಾತ್ರ ಇವೆ. 1250 ಗ್ರಾಂ ಬಂಗಾರ ಸೇರಿ ಒಟ್ಟು, 5.78 ಕೋಟಿ ರೂ. ಮೌಲ್ಯದ ಚರ ಆಸ್ತಿಗಳಿವೆ. ಅಲ್ಲದೇ ಹಿಂದು ಅವಿಭಕ್ತ ಕುಟುಂಬದದಲ್ಲಿ ಅವರು 3.48 ಕೋಟಿ ರೂ. ಪಾಲು ಹೊಂದಿದ್ದಾರೆ. ಪತ್ನಿ ಭಾರತಿ ಅವರ ಬಳಿ 1100 ಗ್ರಾಂ ಬಂಗಾರ ಸೇರಿ 79.32 ಲಕ್ಷ ರೂ.ಮಗಳೂ ರಾಜಲಕ್ಷ್ಮೀ ಹೆಸರಿನಲ್ಲಿ 12.54 ಲಕ್ಷ ರೂ., ಶ್ರೀ ಲಕ್ಷ್ಮೀ ಹೆಸರಿನಲ್ಲಿ 4.90 ಲಕ್ಷ ರೂ. ಚರ ಆಸ್ತಿಗಳಿವೆ.
ವಿಶ್ವೇಶ್ವರ ಅವರು ತಮ್ಮ ಊರು ಕಾಗೇರಿ, ಸೋಂದಾ ಹಾಗೂ ಕಳವೆಯಲ್ಲಿ ಹಿಂದು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಪಾಲನ್ನು ಹೊಂದಿದ್ದಾರೆ. ಕಳವೆಯಲ್ಲಿ ಹೋಂ ಸ್ಟೇ ನಡೆಸುತ್ತಿದ್ದಾರೆ. ಎಲ್ಲದರ ಮಾರುಕಟ್ಟೆ ಮೌಲ್ಯ 1.90 ಕೋಟಿ ರೂ.ಗಳಾಗಿವೆ. ಶಿರಸಿ ಪಟ್ಟಣದಲ್ಲಿ ಜಾಗ, ಮನೆ ಮಾಡಿದ್ದು, ಬೆಂಗಳೂರಿನಲ್ಲಿ ಬಿಡಿಎ ಮಂಜೂರು ಮಾಡಿದ ಸೈಟ್‌ನಲ್ಲಿ ಮನೆ ಕಟ್ಟಿದ್ದಾರೆ. ಅದೆಲ್ಲದ ಒಟ್ಟು ಮಾರುಕಟ್ಟೆ ಮೌಲ್ಯ 4.45 ಕೋಟಿ ರೂ.ಗಳಾಗಿವೆ.
ಇದನ್ನೂ ಓದಿ: ಸಿಡಿಲಿಗೆ ಐದು ಹಸುಗಳು ಬಲಿ