

ಶಿವಮೊಗ್ಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜನಪ್ರತಿನಿಧಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಿಟ್ಟು ಪ್ರತಿಪಕ್ಷ ಬಿಜೆಪಿ ನಾಯಕರದ್ದೇ ಆದರೂ ಹಿಂದೆಂದೂ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಈ ಮಟ್ಟಿನ ವಾಕ್ಸಮರ ನಡೆದ ನಿದರ್ಶನಗಳಿಲ್ಲ.
ಮಧು ಬಂಗಾರಪ್ಪ ವಿರುದ್ಧ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಖಡಕ್ ಮಾತುಗಳನ್ನಾಡಿದ ಮರುದಿನವೇ ಶಾಸಕ ಎಸ್.ಎನ್.ಚನ್ನಬಸಪ್ಪ ಸಿಡಿದೆದ್ದಿದ್ದಾರೆ. ಗೋವಿಂದಾಪುರ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಹಕರಿಸುತ್ತಿಲ್ಲ ಎಂಬುದು ಅವರ ಗಂಭೀರ ಆರೋಪ.
ಕಳೆದ ವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಬಗ್ಗೆ ಮಧು ಬಂಗಾರಪ್ಪ ಆಕ್ಷೇಪಾರ್ಹ ಹೇಳಿಕೆ ನೀಡಿದಾಗಲೇ ಬಿಜೆಪಿ ಆಂತರ್ಯದಲ್ಲಿ ಆಕ್ರೋಶ ಮಡುಗಟ್ಟಿತ್ತು. ಕಳೆದ 20 ತಿಂಗಳಿನಿಂದ ಜಿಲ್ಲಾ ಉಸ್ತುವಾರಿ ಸಚಿವರ ನಡೆಯಿಂದ ಬೇಸತ್ತಿದ್ದ ಬಿಜೆಪಿ ಈಗ ಸರಣಿ ದಾಳಿ ಆರಂಭಿಸಿದೆ.
ಜಿಲ್ಲೆಯ ಜನಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಯಾವುದಕ್ಕೂ ಪರಿಗಣಿಸುತ್ತಿಲ್ಲ. ಎಲ್ಲ ವಿಷಯದಲ್ಲೂ ರಾಜಕೀಯ ಬೆರೆಸುತ್ತಿದ್ದಾರೆ. ತಮಗೆ ಬೇಕಾದಂತೆ ಸಭೆ ನಡೆಸುತ್ತಿದ್ದಾರೆ. ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ. ಶಾಸಕರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಜತೆಗೆ ಪ್ರತಿಪಕ್ಷಗಳ ಬಗ್ಗೆ ಕ್ಷುಲ್ಲಕ ಟೀಕೆ ಮಾಡುತ್ತಿದ್ದಾರೆ. ಲಘುವಾಗಿ ಮಾತನಾಡುತ್ತಿದ್ದಾರೆ ಎಂಬುದು ಬಿಜೆಪಿ ನಾಯಕರ ಪ್ರಮುಖ ಆರೋಪ.
ಯಾವುದೇ ಕಾರ್ಯಕ್ರಮ, ಸಭೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುತ್ತಿಲ್ಲ. ತಮ್ಮ ಸಮಯಕ್ಕೆ ಹೊಂದಿಕೆ ಮಾಡಿಕೊಂಡು ಎಲ್ಲವನ್ನೂ ನಿಗದಿ ಮಾಡುತ್ತಾರೆ. ಜಿಲ್ಲೆಯಲ್ಲಿ ಬೇರೆ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಮಯವನ್ನು ಸೌಜನ್ಯಕ್ಕೂ ಕೇಳುವುದಿಲ್ಲ ಎಂಬುದು ಮತ್ತೊಂದು ಗಂಭೀರವಾದ ದೂರು.
ಈ ಹಿಂದೆ ಹಲವು ಬಾರಿ ಹೊರಗಿನವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗ ಯಾವುದೇ ಭಿನ್ನಾಬಿಪ್ರಾಯಗಳಿರಲಿಲ್ಲ. ಈಗ ಜಿಲ್ಲೆಯವರೇ ಉಸ್ತುವಾರಿ ವಹಿಸಿದ್ದರೂ ತಾಳ-ಮೇಳ ಕೂಡಿ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಉಸ್ತುವಾರಿ ಹಾಗೂ ಬಿಜೆಪಿ ಮುಖಂಡರ ನಡುವೆ ವಾಕ್ಸಮರ ಮತ್ತಷ್ಟು ತಾರಕಕ್ಕೇರುವುದು ನಿಶ್ಚಿತ.