

ಮೈಸೂರು: ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಪಡೆದಿರುವುದು ಶೇ.35 ಮತಗಳನ್ನು ಮಾತ್ರ, ಅದು ಸಹ ಮೋಸ ಮಾಡಿ. ದೇಶದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಕುರಿತು ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತಗಳ್ಳತನ ವಿಚಾರವಾಗಿ ಈಗಾಗಲೇ ಸಭೆ ಮಾಡಿದ್ದೇವೆ, ದೇಶಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಮತಗಳ್ಳತನ ಆಗಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಲೋಕಸಭಾ ಚುನಾವಣೆ ನಂತರ ಮಹಾರಾಷ್ಟ್ರದಲ್ಲಿ 41 ಲಕ್ಷ ಮತದಾರರ ಸಂಖ್ಯೆ ಹೆಚ್ಚಾಗಿದೆ. ಬಿಹಾರದಲ್ಲಿ 61 ಲಕ್ಷ ಮತದಾರರ ಸಂಖ್ಯೆ ಕಡಿಮೆ ಆಗಿದೆ. ಇದರ ಅರ್ಥ ಏನು? ಮತಗಳ್ಳತನ ಆಗಿದೆ ಅಂತ ನನಗೆ ಅನ್ನಿಸುತ್ತಿದೆ ಎಂದು ಹೇಳಿದರು.
ಶೇ.4 ರಷ್ಟು ಮತ ಕಡಿಮೆ ಅಥವಾ ಹೆಚ್ಚು ಆದರೆ ಚುನಾವಣಾ ಆಯೋಗ ಕಾರಣ ನೀಡಬೇಕು. ಇದನ್ನು ಮುಚ್ಚಿ ಹಾಕಿಕೊಂಡು ತಳ್ಳಿ ಹಾಕಿಕೊಂಡು ಹೋದರೆ ಏನರ್ಥ? ಇದು ಎಲ್ಲರ ಮೂಲಭೂತ ಹಕ್ಕು. ಚುನಾವಣೆ ಗೆಲ್ಲೋದು ಪ್ರಚಾರ ಮಾಡೋದು ಅಷ್ಟೇನಾ ಕೇಂದ್ರ ಸರ್ಕಾರದ ಕೆಲಸ. ಚುನಾವಣೆ ಬಗ್ಗೆ ಅಡಿಟ್ ಮಾಡೋ ಹಾಗಿಲ್ವಾ? ಕ್ಯಾಡ್ ರಿಪೋರ್ಟ್ ಪ್ರಕಾರ ಬಿಹಾರದಲ್ಲಿ 70 ಸಾವಿರ ಕೋಟಿ ಮಿಸ್ಸಿಂಗ್ ಆಗಿದೆ. ಇದರ ಬಗ್ಗೆ ಚರ್ಚೆ ಮಾಡೋದು ಬೇಡವೇ? ಕಳೆದ 10 ವರ್ಷದಲ್ಲಿ ಬಿಹಾರದಲ್ಲಿ 150 ಸೇತುವೆಗಳು ಕುಸಿದು ಬಿದ್ದಿವೆ. ಪ್ರಧಾನಿ ನರೇಂದ್ರ ಮೋದಿ ಈ ವಿಚಾರದ ಬಗ್ಗೆ ಮಾತನಾಡದೆ ಬಿಹಾರದಲ್ಲಿ ಪಾಕಿಸ್ತಾನ, ಮುಸ್ಲಿಂ ವಿಚಾರ ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿಗೆ ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ಮಾಡಲಿ. ದೇಶದ ಸಾಲ ಹೆಚ್ಚಾಗಿದೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗಿದೆ ಅದರ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ರಾಹುಲ್ ಗಾಂಧಿ ವಿರುದ್ಧ ಏತಕ್ಕೆ ಪ್ರತಿಭಟನೆ ಮಾಡುತ್ತಾರೆ. ಮೋದಿ ಭಾಷಣವನ್ನು ಎಲ್ಲರು ಕೇಳಬೇಕು. ಆದರೆ, ಅವರನ್ನು ಯಾರು ಪ್ರಶ್ನೆ ಕೇಳಬಾರದು, ಇದು ಬಿಜೆಪಿ ಮನಸ್ಥಿತಿ ಎಂದು ಟೀಕಿಸಿದರು.
ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿ ದೇಶದೊಳಗೆ ನುಸುಳಿದ 80 ಸಾವಿರ ಬಾಂಗ್ಲದೇಶ ನಿವಾಸಿಗಳನ್ನು ಗುರುತಿಸಿ ವಾಪಾಸ್ ಕಳುಹಿಸಿದ್ದೇವೆ. ಬಿಜೆಪಿ ಸರ್ಕಾರ ಎಷ್ಟು ಜನರನ್ನು ಕಳುಹಿಸಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಲಿ. ಆದರೆ, ಈ ವಿಚಾರವಾಗಿ ಅವರು ಪ್ರಚಾರ ಮಾತ್ರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಂಸದ ಪ್ರತಾಪ್ ನೀಡಿದ ಆಹ್ವಾನಕ್ಕೆ ಪ್ರತಿಕ್ರಿಯಿಸಲು ಆಸಕ್ತಿ ತೋರಲಿಲ್ಲ. ಪ್ರತಾಪ್ ಸಿಂಹಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.