ಗಲಾಟೆ ಮಾಡಿಸಲು ಗೂಂಡಾಗಳನ್ನು ಕರೆಸಿದ್ದ ಬಿಜೆಪಿ : ಕಾಂಗ್ರೆಸ್ ವಕ್ತಾರ ಆರೋಪ

Published on

ಮೈಸೂರು:

ಮದ್ದೂರಿನ ಮಸೀದಿ ರಸ್ತೆಯಲ್ಲಿ ನಿಷೇಧಾಜ್ಞೆ ಇದ್ದರೂ ಉದ್ದೇಶಪೂರ್ವಕವಾಗಿ ಗಣೇಶ ವಿಸರ್ಜನೆ ವೇಳೆ ಗಲಾಟೆ ಮಾಡಬೇಕು ಎಂದೇ ಬಿಜೆಪಿ ಗೂಂಡಾಗಳನ್ನು ಕರೆಸಿತ್ತು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಮಸೀದಿಯಿಂದ ಕಲ್ಲು ಹೊಡೆದಿಲ್ಲ ಎಂದು ಐಜಿಪಿ ಬೋರಲಿಂಗಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಕಲ್ಲು ಹೊಡೆದಿರುವುದು ಬಿಜೆಪಿಯವರು. ಗಣೇಶ ವಿಸರ್ಜನೆಗೂ ಮುನ್ನ ಅಲ್ಲಿಗೆ ಬಂದವರಿಗೆ ಬಿಜೆಪಿಯವರು ಗಲಾಟೆಗೆ ತಯಾರಿ ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮೆರವಣಿಗೆ ಹೋಗುವ ಸಂದರ್ಭದಲ್ಲಿ ಇವರೇ ಕಲ್ಲನ್ನು ಹೊಡೆದು ಕೋಮು ಗಲಭೆ ಸೃಷ್ಟಿ ಮಾಡಲು ಯತ್ನಿಸಿದ್ದಾರೆ. ಮಂಡ್ಯವನ್ನು ಕಬ್ಜ ಮಾಡಿಕೊಳ್ಳಬೇಕು ಎಂದು ಅಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದರು.

ಶ್ರೀರಂಗಪಟ್ಟಣ, ನಾಗಮಂಗಲದಲ್ಲಿ ಗಲಭೆ ಮಾಡಿದ ಬಳಿಕ ಈಗ ಮದ್ದೂರಿನಲ್ಲಿ ಕುತಂತ್ರ ಹೆಣೆದಿದ್ದಾರೆ. ಇಷ್ಟಾದರೂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಕೇಂದ್ರದಲ್ಲಿ ಮಂತ್ರಿ ಮಾಡಿದೆ ಎಂದು ಮಂಡ್ಯವನ್ನು ಅವರಿಗೆ ಅಡವಿಟ್ಟು ಬಿಟ್ಟಿದ್ದಾರೆ. ಮುಂದೊಂದು ದಿನ ಇವರು ಜೆಡಿಎಸ್ ಪಕ್ಷವನ್ನೇ ನುಂಗಿ ಬಿಡುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಳ್ಳೆಯ ಆಡಳಿತ ನೀಡಿ ಶಾಂತಿ ಕಾಪಾಡುತ್ತಿದ್ದಾರೆ. ಇದನ್ನು ಸಹಿಸದ ಕೇಂದ್ರ ನಾಯಕರು ಅಮಿತ್ ಷಾ ಸೂಚನೆಯಂತೆ ಕರ್ನಾಟಕದಲ್ಲಿ ಗಲಾಟೆ ಎಬ್ಬಿಸಿ ಅಶಾಂತಿ ಸೃಷ್ಟಿಸಿ ಅಧಿಕಾರ ಪಡೆಯಬೇಕು ಎಂಬ ಸಂಚು ರೂಪಿಸಿದ್ದಾರೆ ಎಂದರು.

ಚಾಮುಂಡಿ ಚಲೋ ಹೆಸರಿನಲ್ಲಿ ಗಲಾಟೆ ಎಬ್ಬಿಸಲು ಪ್ರಯತ್ನಪಟ್ಟರು ಅದು ಸಾಧ್ಯವಾಗಲಿಲ್ಲ. ಈ ಎರಡೂ ಘಟನೆಗಳನ್ನು ಎನ್‌ಐಎ ಮತ್ತು ಸಿಬಿಐಗೆ ವಹಿಸಿ ಎಂದು ಬಿಜೆಪಿಯವರು ಒತ್ತಾಯ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಗರ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ.ರಾಮು, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net