ವೀಣಾ ಮೇಯರ್, ಸತೀಶ ಉಪ ಮೇಯರ್

20 Dwd 1A
Published on

ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಅವಧಿಗೆ ಕಮಲ ಅರಳಿದೆ. 22ನೇ ಅವಧಿಗೆ ಮೇಯರ್ ಆಗಿ ವೀಣಾ ಭರದ್ವಾಡ ಹಾಗೂ ಉಪ ಮೇಯರ್ ಆಗಿ ಸತೀಶ ಹಾನಗಲ್ ಚುನಾಯಿತರಾದರು.
ನಗರದ ಪಾಲಿಕೆ ಕಟ್ಟಡದ ಸ್ವಾಂತಂತ್ರ್ಯದ ಅಮೃತ ಮಹೋತ್ಸವ ಭವನದಲ್ಲಿ ಮೇಯರ್- ಉಪ ಮೇಯರ್ ಆಯ್ಕೆ ಚುನಾವಣೆ ನಡೆಯಿತು. ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಬೆಳಗ್ಗೆ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಮೇಯರ್ ಹುದ್ದೆಗೆ ಬಿಜೆಪಿಯಿಂದ ವೀಣಾ ಬರದ್ವಾಡ, ಕಾಂಗ್ರೆಸ್‌ನಿಂದ ಸುವರ್ಣಾ ಕಲಕುಂಟಲಾ ಮತ್ತು ಎಐಎಂಐಎಂನಿಂದ ವಹೀದಾಖಾನಂ ಕಿತ್ತೂರ ನಾಮಪತ್ರ ಸಲ್ಲಿಸಿದರು. ಉಪ ಮೇಯರ್ ಹುದ್ದೆಗೆ ಬಿಜೆಪಿಯಿಂದ ಸತೀಶ ಹಾನಗಲ್, ಕಾಂಗ್ರೆಸ್‌ನಿಂದ ರಾಜು ಕಮತಿ ಮತ್ತು ಎಐಎಂಐಎಂನಿಂದ ನಜೀರ್‌ಅಹ್ಮದ್ ಹೊನ್ಯಾಳ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆಯ ನಂತರ ಮಧ್ಯಾಹ್ನ 1 ಗಂಟೆಗೆ ಸಭೆ ನಡೆಸಲಾಯಿತು. ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.
* ಬಿಜೆಪಿಗೆ 46 ಮತ:
ಬಿಜೆಪಿಯ 39 ಸದಸ್ಯರ ಪೈಕಿ ಸರಸ್ವತಿ ದೋಂಗಡಿ ಕಾರಣಾಂತರಗಳಿಂದ ಗೈರಾಗಿದ್ದರು. ಉಳಿದ 38 ಸದಸ್ಯರು ವೀಣಾ ಹಾಗೂ ಸತೀಶ ಅವರನ್ನು ಬೆಂಬಲಿಸಿದರು. ಉಳಿದಂತೆ ಲೋಕಸಭಾ ಸದಸ್ಯ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಕೂಡ ಬಿಜೆಪಿಗೆ ಮತ ಚಲಾಯಿಸಿದರು. ಪಕ್ಷೇತರ ಸದಸ್ಯರಾದ ಚಂದ್ರಿಕಾ ಮೇಸಿ, ಕಿಶನ್ ಬೆಳಗಾವಿ, ಚೇತನ್ ಹಿರೇಕೆರೂರ ಹಾಗೂ ದುರ್ಗಮ್ಮ ಬಿಜವಾಡ ಬಿಜೆಪಿಯನ್ನು ಬೆಂಬಲಿಸಿದರು. ಹೀಗಾಗಿ ವೀಣಾ ಬರದ್ವಾಡ ಮತ್ತು ಸತೀಶ ಹಾನಗಲ್ ಗೆಲುವಿಗೆ ಅಗತ್ಯವಿದ್ದ ಮ್ಯಾಜಿಕ್ ಸಂಖ್ಯೆ ಮೀರಿ 46 ಮತ ಪಡೆದು ಗೆಲುವಿನ ನಗೆ ಬೀರಿದರು.
* ಕಾಂಗ್ರೆಸ್‌ಗೆ 37 ಮತ:
33 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಪರ ಎಲ್ಲ ಸದಸ್ಯರೂ ಸುವರ್ಣಾ ಹಾಗೂ ರಾಜು ಕಮತಿಗೆ ಬೆಂಬಲ ಸೂಚಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಪಕ್ಷೇತರ ಸದಸ್ಯರಾದ ಮಂಜುನಾಥ ಬುರ್ಲಿ ಮತ್ತು ಅಕ್ಷತಾ ಅಸುಂಡಿ ಮತ್ತು ಜೆಡಿಎಸ್‌ನ ಲಕ್ಷ್ಮೀ ಹಿಂಡಸಗೇರಿ ಕಾಂಗ್ರೆಸ್ ಪರ ಮತ ಚಲಾಯಿಸಿದರು. 37 ಮತ ಪಡೆದರೂ ಮ್ಯಾಜಿಕ್ ಸಂಖ್ಯೆ ತಲುಪಲಾಗದೆ ಸುವರ್ಣಾ ಹಾಗೂ ರಾಜು ಕಮತಿ ಸೋಲನುಭವಿಸಿದರು.
* ಎಐಎಂಐಎಂ 3 ಮತ:
ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಐಎಂಐಎಂನ ವಹೀದಾಖಾನಂ ಕಿತ್ತೂರ ಮತ್ತು ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ನಜೀರ್‌ಅಹ್ಮದ್ ಹೊನ್ಯಾಳ ತಲಾ 3 ಮತ ಪಡೆದರು.
* ಬಿಜೆಪಿ ವಿಜಯೋತ್ಸವ:
ಮೇಯರ್- ಉಪ ಮೇಯರ್ ಆಯ್ಕೆ ೋಷಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಾಲಿಕೆ ಮುಖ್ಯದ್ವಾರದ ಬಳಿ ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net