

ವಿಜಯಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಗೊಂದಲ ಸೃಷ್ಠಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದರು.
ಇಲ್ಲಿನ ಕೋರ್ಟ್ ಸರ್ಕಲ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ ಏಕಾಏಕಿ ನುಗ್ಗಲೆತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆಯಲೆತ್ನಿಸಿದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಭಾರತ ಮಾತಾ ಕೀ ಜೈ ಎಂದು ಉದ್ಘೋಷ ಹಾಕಿದ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಗೃಹ ಮಂತ್ರಿ ಅಮಿತ್ ಷಾ ಅವರ ಹೇಳಿಕೆಯನ್ನು ಕಾಂಗ್ರೆಸ್ ಸಂಪೂರ್ಣ ತಿರುಚಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಕುರಿತ ಹೇಳಿಕೆಯ ಸಂಪೂರ್ಣ ವಿಡಿಯೋ ಮರೆಮಾಚಿ ಅದರ ಅರ್ಧಭಾಗ ಮಾತ್ರ ಇಟ್ಟುಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದೆ ಎಂದರು.
ಇನ್ನೊಂದೆಡೆ ರಾಜ್ಯದಲ್ಲಿ ವಿಪ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸುವ ಮೂಲಕ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ. ಇದು ಕಾಂಗ್ರೆಸ್ ಪಕ್ಷದ ಹತಾಶ ಮನೋಭಾವವನ್ನು ಪ್ರದರ್ಶಿಸುತ್ತಿದೆ. ಕಾಂಗ್ರೆಸ್‌ನ ಈ ನಡೆ ಜನವಿರೋಧಿ ಮಾತ್ರವಲ್ಲ; ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದರು.
‘ಪ್ರಜಾಪ್ರಭುತ್ವದ ದೇಗುಲವೆನಿಸಿರುವ ಸುವರ್ಣ ಸೌಧಕ್ಕೆ ಗುಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ದುಷ್ಕೃತ್ಯ ನಡೆಸಲು ಪ್ರಚೋದಿಸಿದ್ದಾರೆ. ಇದು ಅತ್ಯಂತ ಖಂಡನೀಯ. ಇದಿಷ್ಟೇ ಅಲ್ಲ; ಹಲ್ಲೆ ಯತ್ನಕ್ಕೊಳಗಾದ ಸಿ.ಟಿ. ರವಿ ಅವರನ್ನೇ ಬಂಧಿಸಿದ್ದಾರೆ. ಈ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಸಿ.ಟಿ. ರವಿ ಅವರು ಅತ್ಯಂತ ಹಿರಿಯ ವ್ಯಕ್ತಿ. ಹಲವು ಬಾರಿ ಶಾಸಕರಾದವರು. ಸಚಿವರಾಗಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದವರು. ಕಾಂಗ್ರೆಸ್‌ನ ಹುಳುಕು, ಷಡ್ಯಂತ್ರ, ದುಷ್ಟತನವನ್ನು ಸದಾ ಬಯಲಿಗೆ ಎಳೆಯುತ್ತಿದ್ದ ವ್ಯಕ್ತಿ. ಅವರ ಬಂಧನ ಮಾಡಿದರೆ ಪಕ್ಷವನ್ನು ದುರ್ಬಲಗೊಳಿಸಬಹುದೆಂಬ ಹುನ್ನಾರ ಇದರ ಹಿಂದಿದೆ. ಆದರೆ, ನಾವು ನ್ಯಾಯಾಂಗದ ಮೇಲೆ ವಿಶ್ವಾಸ ಇಟ್ಟಿದ್ದೇವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ ಮಾತನಾಡಿ, ಮುಡಾ ಸೇರಿ ವಿವಿಧ ಹಗರಣಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಪರಾಕಿ ಕೊಟ್ಟ ರಾಜ್ಯದ ನ್ಯಾಯಾಂಗ ವ್ಯವಸ್ಥೆಯು ನಮಗೆ ನ್ಯಾಯ ಕೊಡುವ ವಿಶ್ವಾಸ ಇದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಬದುಕಿರುವಾಗಲೇ ಅವಮಾನಿಸಿದ ಮತ್ತು ತೀರಿಕೊಂಡ ಬಳಿಕವೂ ಅವಮಾನಿಸುತ್ತಲೇ ಬಂದಿರುವುದು ಕಾಂಗ್ರೆಸ್ ಇದೀಗ ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ. ಈ ದುಷ್ಕೃತ್ಯಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಚಿದಾನಂದ ಚಲವಾದಿ, ರಾಜೇಶ್ ತಾವಸೆ, ಲಕ್ಷ್ಮಿ ಕನ್ನೊಳ್ಳಿ, ರಾಘವೇಂದ್ರ ಕಾಪ್ಸೆ, ನಗರ ಮಂಡಳ ಅಧ್ಯಕ್ಷ ಶಂಕರ ಹೂಗಾರ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ರಾಠೋಡ ನೇಬಗೇರಿ, ಶ್ರೀಹರಿ ಗೊಳಸಂಗಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ, ರಾಜಕುಮಾರ ಗೌಂಡಿ, ಆನಂದ ಮುಚ್ಚಂಡಿ, ಪರಶುರಾಮ ಹೊಸಪೇಟೆ, ಪ್ರವೀಣ ಒಂದಾಲಮಠ, ಅಪ್ಪು ದೇಸಾಯಿ, ರವಿ ಬಿರಾದಾರ, ರವಿಚಂದ್ರ ಉಪನದಿನ್ನಿ, ವಿಠ್ಠಲ ನಡುವಿನಕೆರೆ, ವಿನೋದ ಪತ್ತಾರ, ಸ್ವರೂಪ್ ಸಪ್ತಾಳೆ, ಅನಿಲ ಉಪ್ಪಾರ, ಕಿರಣ್ ರಾಥೋಡ, ರಾಹುಲ್ ಹಿರೇಮಠ, ವಿಠಲ ಕಾಗರ್, ಸುಚಿತ್ರ ಜಾಧವ್, ಸುವರ್ಣ ಕುರ್ಲೆ, ರಾಜಲಕ್ಷ್ಮಿ ಪ್ರತನ್ನವರ್, ವಿನೋದ್ ತೆಲಸಂಗ ಮತ್ತಿತರರಿದ್ದರು.