

ಮಂಡ್ಯ: ಪಕ್ಷದ ತತ್ವ ಸಿದ್ಧಾಂತ ವಿಚಾರಧಾರೆಗಳನ್ನು ಪ್ರತಿ ಕಾರ್ಯಕರ್ತರೂ ತಮ್ಮ ನಡವಳಿಕೆಯ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲು ಕಟಿಬದ್ಧರಾಗಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.
ನಗರದ ಗಾಯತ್ರಿ ಬ್ರಾಹ್ಮಣ ಸಮುದಾಯ ಭವನದಲ್ಲಿ ಶನಿವಾರ ಮೈಸೂರು ಮತ್ತು ಬೆಂಗಳೂರು ವಿಭಾಗದ ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಬಿಜೆಪಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವು ಪಕ್ಷದ ಕಾರ್ಯಕರ್ತರಿಗೆ ತಮ್ಮ ಪಕ್ಷದ ಮೂಲ ವಿಚಾರಗಳೇ ಗೊತ್ತಿರಲಿಲ್ಲ. ಆದರೆ ಬಿಜೆಪಿ ತನ್ನ ಪಕ್ಷದ ವಿಚಾರಧಾರೆಗಳನ್ನು ಹೇಗೆ ಪಡೆಯಬೇಕು, ಹೇಗೆ ನೀಡಬೇಕು, ಆಡಳಿತ ಹೇಗೆ ನಡೆಸಬೇಕು, ಜನರ ಮತ್ತು ಕಾರ್ಯಕರ್ತರ ಸಂಪರ್ಕ ಹೇಗೆ ಇಟ್ಟುಕೊಳ್ಳಬೇಕು ಎಂಬ ವಿಷಯಗಳನ್ನು ಪ್ರಶಿಕ್ಷಣ ವರ್ಗದ ಸಭೆಗಳಲ್ಲಿ ಕಲಿಸಲಾಗುತ್ತಿದೆ. ಇದೇನು ಹೊಸದಲ್ಲ. ಈ ಹಿಂದೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಶ್ಯಾಂ ಪ್ರಸಾದ್ ಮುಖರ್ಜಿ ಪರಂಪರೆಯಲ್ಲಿ 27 ಜನ ಶಾಸಕರಿಗೆ 15 ದಿನ ಎಡೆಬಿಡದೆ ಪ್ರಶಿಕ್ಷಣ ನೀಡಿದ ಇತಿಹಾಸ ನಮ್ಮ ಪಕ್ಷಕ್ಕೆ ಇದೆ ಎಂದರು.
ಆರ್ಥಿಕ ತಜ್ಞ ವಿಶ್ವೇಶ್ವರಭಟ್ ಮಾತನಾಡಿ, ಹಿಂದೆ ಆರ್ಥಿಕತೆ ಶಿಥಿಲವಾಗಿತ್ತು. ಯಾವ ಸಮಯದಲ್ಲಾದರೂ ನೆಲ ಕಚ್ಚ ಕಚ್ಚಬಹುದು ಎಂಬ ಪರಿಸ್ಥಿತಿಯಲ್ಲಿತ್ತು. ಒಟ್ಟಾರೆ ಐಸಿಯುನಲ್ಲಿತ್ತು. ನರೇಂದ್ರ ಮೋದಿ ಅವರು ಅಧಿಕಾರ ಬಂದಾಗ ಇದ್ದ ಪರಿಸ್ಥಿತಿಯ ಅರಿವಾದರೆ ಸಾಧನೆಯ ಆಳ ಅಗಲ ಅರ್ಥವಾಗುತ್ತದೆ. ಕಳೆದ 9 ವರ್ಷದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಫಣೀಶ್ ಇತರರಿದ್ದರು.