

ಬೆಂಗಳೂರು: ದೇಶಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆಯಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲೂ ಮತ್ತೊಂದು ಸುತ್ತಿನ ರಾಜಕೀಯ ಧ್ರುವೀಕರಣವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಅರವಿಂದ ಲಿಂಬಾವಳಿ ಭಾನುವಾರ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಪಕ್ಷದ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಬಿಜೆಪಿ ಇನ್ನಷ್ಟು ಭದ್ರವಾಗಲಿದೆ. ರಾಜಕೀಯ ಧ್ರುವೀಕರಣ ಯಾವ ರೀತಿ ಆಗಲಿದೆ ಎಂಬುದನ್ನು ಕಾದುನೋಡಿ ಎಂದು ಮುಗುಂ ಆಗಿ ಹೇಳಿದರು.
ಜೆಡಿಎಸ್ ಜತೆ ಕೈಜೋಡಿಸಿದ್ದೇವೆ: ವಿಧಾನಪರಿಷತ್ನಲ್ಲಿ ನಮ್ಮ ಪಕ್ಷಕ್ಕೆ ಬಹುಮತವಿಲ್ಲ. ಹೀಗಾಗಿ ಜೆಡಿಎಸ್ ಜತೆ ಕೈಜೋಡಿಸಿದ್ದು, ಅನೇಕ ವಿಚಾರಗಳ ದೃಷ್ಟಿಯಿಂದ ಸಭಾಪತಿಯನ್ನು ಇಳಿಸಲು ಒಂದಾಗಿದ್ದೇವೆ ಎಂದರು. ಆ ಪಕ್ಷದವರು ಮುಂದಿನ ದಿನಗಳಲ್ಲಿ ವಿಷಯಾಧಾರಿತವಾಗಿ ಹೋಗುತ್ತಾರೆಯೇ, ಇಲ್ಲವೇ? ಬೇರೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರಾ? ಎನ್ನುವುದನ್ನು ಈಗಲೇ ಹೇಳಲಾಗದು ಎಂದ ಲಿಂಬಾವಳಿ, ಬಿಜೆಪಿ ಜತೆಗಿನ ಜೆಡಿಎಸ್ ಸಖ್ಯ ಮತ್ತಷ್ಟು ಬಲಗೊಳ್ಳುವ ಸುಳಿವು ನೀಡಿದರು.
ಶತ್ರುವಿನ ಶತ್ರು ಮಿತ್ರ ಎನ್ನು ವುದು ರಾಜಕೀಯ ಪರಿಭಾಷೆ. ರಾಜಕೀಯವಾಗಿ ಕಾಂಗ್ರೆಸ್ ನಮಗೆ ಮೊದಲ ವಿರೋಧಿ. ಬಿಜೆಪಿಜೆಡಿಎಸ್ ಸಂಬಂಧ ಒಂದೊಂದು ಕಾಲದಲ್ಲಿ ಒಂದು ರೀತಿ ಇರುತ್ತದೆ. ಜೆಡಿಎಸ್ ಆಗಾಗ ನಮ್ಮ ಹತ್ತಿರಕ್ಕೆ ಬರುತ್ತದೆ. ಈಗಿನದು ಅದರ ಬೆಳವಣಿಗೆಯ ಭಾಗ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ
ವರದಿ ಶುದ್ಧ ಸುಳ್ಳು
ಅರವಿಂದ ಲಿಂಬಾವಳಿ ಹೇಳಿಕೆಗೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಎಂಬ ಅರ್ಥ ಕಲ್ಪಿಸಿದ ಬೆನ್ನಲ್ಲೇ ವಿಲೀನ ವರದಿಗಳು ಶುದ್ಧ ಸುಳ್ಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಳ್ಳಿ ಹಾಕಿದ್ದಾರೆ. ಭಾನುವಾರ ತುರ್ತು ಹೇಳಿಕೆ ನೀಡಿರುವ ಅವರು, ಸಭಾಪತಿ ವಿಚಾರದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬೆಂಬಲಿಸಿದ್ದಾರಷ್ಟೇ. ಗೋಹತ್ಯೆ ನಿಷೇಧದ ಬಗ್ಗೆ ಬೆಂಬಲವಿಲ್ಲವೆಂದು ಹೇಳಿದ್ದರಿಂದ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿದ್ದೇವೆ ಎಂದಿದ್ದಾರೆ. ವಿಧಾನಸಭೆ ಚುನಾವಣೆ ಇನ್ನೂ ಎರಡೂವರೆ ವರ್ಷವಿದೆ. ಯಾವುದೇ ಜೆಡಿಎಸ್ ಶಾಸಕರು ಬಿಜೆಪಿಗೆ ಬರುವುದಾಗಲಿ ಅಥವಾ ಜೆಡಿಎಸ್ ವಿಲೀನವಾಗಲಿ ಇಲ್ಲ. ಅಂತಹ ಯಾವುದೇ ಸಂದರ್ಭ ಇಲ್ಲವೆಂದು ಬಿಎಸ್ವೈ ಹೇಳಿದ್ದಾರೆ.
ವಿಷಯಾಧಾರಿತ ಹೊಂದಾಣಿಕೆಯಷ್ಟೇ
ವಿಷಯಾಧಾರಿತವಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆಯಷ್ಟೇ. ಅಗತ್ಯಬಿದ್ದಾಗ ಆ ಪಕ್ಷದ ಜತೆಗೆ ವಿಷಯಾಧಾರಿತವಾಗಿ ವಿಶ್ವಾಸಪೂರ್ವಕ ನಡೆ ಇರುತ್ತದೆ. ವಿಲೀನದಂತಹ ಕಪೋಲಕಲ್ಪಿತ ಸುದ್ದಿಗಳಿಗೆ ಪ್ರಾಮುಖ್ಯತೆ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್, ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಜನರ ಗಟ್ಟಿ ಧ್ವನಿಯಾಗಿದ್ದು, ವಿಲೀನದಂತಹ ಅವಿವೇಕತನ ಪ್ರದರ್ಶನ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಎಚ್ಡಿಕೆ ಒಳಸಂಚಿನ ಪ್ರಿನ್ಸಿಪಾಲ್!
ತುಮಕೂರು: ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಜಿಲ್ಲೆಯ ರಾಜಕಾರಣದಲ್ಲೂ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯಗೆ ನೈತಿಕ ಬೆಂಬಲವಾಗಿ ಕಾಂಗ್ರೆಸ್ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿವಾಸದಲ್ಲಿ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ಚಾಮುಂಡೇಶ್ವರಿ, ಬಾದಾಮಿ ಎರಡೂ ಕ್ಷೇತ್ರದಲ್ಲೂ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ನಡುವೆ ಒಳಒಪ್ಪಂದ ಆಗಿತ್ತು ಎಂದ ಶ್ರೀನಿವಾಸ್, ಇದರಲ್ಲಿ ಮುಚ್ಚುಮರೆ ಇಲ್ಲ, ಸಿದ್ದರಾಮಯ್ಯ ಸೋಲಿಗೆ ಒಳಒಪ್ಪಂದವೇ ಕಾರಣ. ಆದರೆ, ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ದೇವೇಗೌಡರು ಸೋಲಲು ಅತಿಯಾದ ಆತ್ಮವಿಶ್ವಾಸ ಕಾರಣ ಎಂದರು. ಒಳ ಸಂಚು ಮಾಡುವುದರಲ್ಲಿ ಎಚ್ಡಿಕೆ ಎತ್ತಿದ ಕೈ. ಅವರು ರಾಜಕೀಯ ಒಳಸಂಚಿನ ಪ್ರಿನ್ಸಿಪಾಲ್ ಇದ್ದಂತೆ. ನಾವೆಲ್ಲ ಸ್ಟೂಡೆಂಟ್ಸ್ ಎಂದು ರಾಜಣ್ಣ ಹರಿಹಾಯ್ದರು.
ಸರ್ಕಾರ ಪತನಕ್ಕೆ ಇಬ್ಬರೂ ಕಾರಣ
ಮೈಸೂರು: ಸರ್ಕಾರ ಬೀಳುತ್ತೆ ಅಂಥ ಗೊತ್ತಿದ್ದರೂ ಎಚ್.ಡಿ.ಕುಮಾರಸ್ವಾಮಿ ಅಮೆರಿಕಕ್ಕೆ ಹೋಗಿ ಕುಳಿತರು. ಬಂಡಾಯ ಎದ್ದ ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ತಡೆಯಬಹುದಿತ್ತು. ಆದರೆ ಅವರು ಆ ಕೆಲಸ ಮಾಡಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಈ ಇಬ್ಬರೂ ನಾಯಕರು ಕಾರಣ ಎಂದು ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರತಿಪಾದಿಸಿದರು. ಸಿದ್ದಲಿಂಗಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೂಗಾಡುತ್ತಾರೆಂಬ ಕಾರಣಕ್ಕೆ ಸರ್ಕಾರ ಪತನಕ್ಕೆ ಕುಮಾರಸ್ವಾಮಿ ಅವಕಾಶ ಮಾಡಿಕೊಡಬಾರದಿತ್ತು. ಸಿದ್ದರಾಮಯ್ಯ ಈಗಲೂ ಕೂಗಾಡುತ್ತಾರೆ. ಹೀಗಿದ್ದರೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಮುನ್ನಡೆಸುತ್ತಿಲ್ಲವೇ ಎಂದು ಎಚ್ಡಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು.
ವಿಲೀನ ಅಸಾಧ್ಯ: ಎಚ್.ಡಿ.ದೇವೇಗೌಡರು ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕಾಗಿ ಹೋರಾಟ ಮಾಡಿದವರು. ಹೀಗಾಗಿ ಅವರು ಬದುಕಿರುವವರೆಗೂ ಬಿಜೆಪಿ-ಜೆಡಿಎಸ್ ವಿಲೀನ ಸಾಧ್ಯವಿಲ್ಲ. ಆದರೆ, ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಅವಕಾಶ ಇದೆ ಎಂದು ಜಿ.ಟಿ.ದೇವೇಗೌಡ ಹೇಳಿದರು.