ಬಂಟ್ವಾಳದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಡಿಶುಂ ಡಿಶುಂ

cONGRESS BJP
Published on

ಬಂಟ್ವಾಳ: ಪ್ರತ್ಯೇಕ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಜಮಾಯಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ, ಹೊಯೈಕೈ ಕಾವಳಕಟ್ಟೆಯಲ್ಲಿ ಬುಧವಾರ ನಡೆಯಿತು.

ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕಚೇರಿ ಮುಂಭಾಗ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾವಳಮೂಡೂರು ಗ್ರಾಪಂ ನೀರು ಹಾಗೂ ಮನೆ ತೆರಿಗೆಯನ್ನು ಏಕಾಏಕಿ ಏರಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದರು.

ಈ ಹಂತದಲ್ಲಿ ಆರ್‌ಟಿಐ ಕಾರ್ಯಕರ್ತ ಪದ್ಮನಾಭ ಮಯ್ಯ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು. ಈ ಸಂದರ್ಭ ಉಭಯ ಪಕ್ಷದ ಕಾರ್ಯಕರ್ತರ ನಡುವೆ ನೂಕಾಟ, ಪರಸ್ಪರ ತಳ್ಳಾಟ ನಡೆಯಿತು.

ಇದೇ ವೇಳೆ ಆರ್‌ಟಿಐ ಕಾರ್ಯಕರ್ತ ಪದ್ಮನಾಭ ಮಯ್ಯ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆ ಪ್ರತಿಭಟನೆ ರೂಪ ಬದಲಾಯಿತು. ಉಭಯ ಪಕ್ಷದ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಎಸ್‌ಐ ಸೌಮ್ಯಾ ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ಉಭಯ ಪಕ್ಷದ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದವು. ಸ್ಥಳದಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ಪೋಲೀಸರು ಲಾಠಿ ಬೀಸಿ ಚದುರಿಸಿದರು. ಆರ್‌ಟಿಐ ಕಾರ್ಯಕರ್ತ ಪದ್ಮನಾಭ ಮಯ್ಯ ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದರೆ, ಕಾಂಗ್ರೆಸ್ ಕಾರ್ಯಕರ್ತರಾದ ಸದಾನಂದ ಶೆಟ್ಟಿ, ಬಿ.ಆರ್.ಅಂಚನ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net