ಶಾಸಕರ ತೇಜೋವಧೆಗೆ ಬಿಜೆಪಿ ಮುಂದು

Published on

ವಿರಾಜಪೇಟೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಗೊಬ್ಬರ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಗಳು ಏರಿಕೆ ಕಂಡಿದ್ದವು. ಆಗ ಕಾಂಗ್ರೆಸ್ ಎಲ್ಲಿಯೂ ಸಮಾಜಕ್ಕೆ ಕಳಂಕ ತರುವಂತೆ ಪ್ರತಿಭಟನೆಗೆ ಮುಂದಾಗಲಿಲ್ಲ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಆರೋಪಿಸಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ.ವಿ.ಜಾನ್ಸನ್ ಮಾತನಾಡಿ, ಇಂಧನ ದರ ಏರಿಕೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಕಡೆಗಣಿಸುವಂತೆ ಮಾಡಿ ಪ್ರತಿಕೃತಿ ದಹಿಸಿ, ಕಲ್ಪಿತ ಶವಯಾತ್ರೆ ನಡೆಸುವ ಮೂಲಕ ಬಿಜೆಪಿ ಕೆಳಮಟ್ಟದ ರಾಜಕೀಯ ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಪೊನ್ನಣ್ಣ ಅವರು ಅಭಿವೃದ್ಧಿ ಹರಿಕಾರ ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 300 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಜಿಲ್ಲೆಗೆ ಬಿಡುಗಡೆಗೊಳಿಸಿದ್ದಾರೆ. ಕೊಡಗು ಯೋಧರ ಮತ್ತು ಕ್ರೀಡಾಪಟುಗಳ ನಾಡಾಗಿರುವ ಕಾರಣ ಗ್ರಾಮೀಣ ಭಾಗದ ಆಟದ ಮೈದಾನಗಳ ಅಭಿವೃದ್ಧಿಗಾಗಿ ವಿಶೇಷ ಅನದಾನ ತಂದಿದ್ದಾರೆ. ಜಾತಿ, ಧರ್ಮ ಪಕ್ಷಾತೀತವಾಗಿ ಸರ್ವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ಮುಂದಾಗಿರುವ ಶಾಸಕರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹಾಲುಗುಂದ ಗ್ರಾಮ ಪಂಚಾಯಿತಿ ಅದ್ಯಕ್ಷ ಪಂದಿಕಂಡ ದಿನೇಶ್ ಮಾತನಾಡಿ, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈ ಹಿಂದಿನ ಸರ್ಕಾರಗಳು ಅನುದಾನ ನೀಡಿದ್ದರೂ, ಹಣದ ಅಭಾವದಿಂದ ಕಾಮಗಾರಿಗಳು ಕುಂಠಿತಗೊಂಡು ಸ್ಥಗಿತವಾಗುತ್ತಿದ್ದವು. ಆದರೆ ಶಾಸಕ ಎ.ಎಸ್. ಪೊನ್ನಣ್ಣ ಅವರು ವಿಶೇಷ ಆಸಕ್ತಿ ವಹಿಸಿ ಸುಮರು 30 ರಿಂದ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಸಕರ ಮತ್ತು ರಾಜ್ಯ ನಾಯಕರ ಕಲ್ಪಿತ ಶವಯಾತ್ರೆ ಮತ್ತು ಪ್ರತಿಕೃತಿ ದಹನ ಮಾಡಿರುವ ಬಿಜೆಪಿ ನಡೆ ಖಂಡನೀಯ ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರಾದ ಪಳೆಯಂಡ ಹರಿ, ಮಚ್ಚಾರಂಡ ಕಿರಣ್ ಕಣ್ಣಂಗಾಲ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net