

ಶಿಗ್ಗಾಂವಿ: ಪಟ್ಟಣದ ಪುರಸಭೆಯ ಆಡಳಿತ ಮತ್ತೆ ಬಿಜೆಪಿಯ ಪಾಲಾಗಿದೆ. ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಸಿದ್ದಾರ್ಥಗೌಡ್ರು ಪಾಟೀಲ, ಉಪಾಧ್ಯಕ್ಷೆಯಾಗಿ ಶಾಂತಾಬಾಯಿ ಸುಬೇದಾರ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಅ.ವರ್ಗ ಮಹಿಳೆಗೆ ಮೀಸಲಾಗಿತ್ತು. ಪುರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 21ನೇ ವಾರ್ಡ್‌ನ ಸಿದ್ದಾರ್ಥಗೌಡ್ರು ಪಾಟೀಲ, ಕಾಂಗ್ರೆಸ್‌ನಿಂದ 13ನೇ ವಾರ್ಡ್‌ನ ಸದಸ್ಯೆ ವಸಂತಾ ಬಾಗೂರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 10ನೇ ವಾರ್ಡ್‌ನ ಶಾಂತಾಬಾಯಿ ಸುಬೇದಾರ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು.
23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ 9 ಬಿಜೆಪಿ ಸದಸ್ಯರು. 6 ಕಾಂಗ್ರೆಸ್ ಸದಸ್ಯರು ಸೇರಿದಂತೆ 8 ಪಕ್ಷೇತರರಿದ್ದಾರೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತದ ಇಲ್ಲದಿರುವುದರಿಂದ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಮತ್ತೊಮ್ಮೆ ಅಧಿಕಾರ ಉಳಿಸಿಕೊಂಡಿದೆ. 8 ಜನ ಪಕ್ಷೇತರರ ಪೂರ್ಣ ಬೆಂಬಲದೊಂದಿಗೆ ಒಟ್ಟು 17 ಮತಗಳನ್ನು ಪಡೆದ ಸಿದ್ಧಾರ್ಥಗೌಡ್ರು ಪಾಟೀಲ ಗೆಲುವಿನ ನಗೆ ಬೀರಿದರೆ ಕಾಂಗ್ರೆಸ್‌ನ ವಸಂತಾ ಬಾಗೂರ 6 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷರಾಗಿ ಶಾಂತಾಬಾಯಿ ಸುಬೇದಾರ ಅವಿರೋಧವಾಗಿ ಆಯ್ಕೆಯಾದರು.
ತಹಸೀಲ್ದಾರ್ ಸಂತೋಷ ಹಿರೇಮಠ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸದಸ್ಯರಾದ, ಸುಭಾಸ ಚೌಹಾಣ, ಶ್ರೀಕಾಂತ ಬುಲ್ಲಕ್ಕನವರ, ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ರೂಪಾ ಬನ್ನಿಕೊಪ್ಪ, ಶೇಖವ್ವ ವಡ್ಡರ, ಸಂಗೀತಾ ವಾಲ್ಮೀಕಿ, ಅನುರಾಧಾ ಮಾಳವದೆ, ದಯಾನಂದ ಅಕ್ಕಿ, ರಮೇಶ ವಾನಹಳ್ಳಿ, ಜಾಫರಖಾನ ಪಠಾಣ, ಸುಲೇಮಾನ ಬಾಷಾ ತರಘಟ್ಟ, ಜ್ಯೋತಿ ನಡುರ, ರೇಖಾ ಕಂಕನವಾಡ, ಸುಲೇಮಾನ ಬಾಷಾ ತರ್ಲಘಟ್ಟ, ನಸರೀನಬಾನು ತಿಮ್ಮಾಪೂರ, ಮಮತಾಜ ಗೊಟಗೋಡಿ, ಮಹಬೂಬಿ ನೀರಲಗಿ, ಮುಸ್ತಾಕ ಅಹ್ಮದ ತಹಶೀಲ್ದಾರ, ಗೌಸಖಾನ ಮುನಶಿ, ಮುುನ್ನಿಸಾ ಲಕ್ಷ್ಮೀಶ್ವರ ಇದ್ದರು.
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಂತೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಆಡಳಿತ ನಡೆಸಲಾಗುತ್ತದೆ. ಮುಖ್ಯವಾಗಿ ಪಟ್ಟಣದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.ಸಿದ್ಧಾರ್ಥಗೌಡ್ರು ಪಾಟೀಲ, ಶಿಗ್ಗಾವಿ ಪುರಸಭೆ ನೂತನ ಅಧ್ಯಕ್ಷ