

ಸಿದ್ದಾಪುರ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಡ್ರೆಸ್‌ಗೆ ಇರದಂತೆ ಹೋಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಿದ್ದಾಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯಕ್ಕೆ ರಾಜ್ಯದ ಜನ ಶಿಕ್ಷೆ ಕೊಟ್ಟಿದ್ದಾರೆ. ಜನ ಶಿಕ್ಷೆ ಕೊಟ್ಟ ಬಳಿಕ ಬಿಜೆಪಿಗರು ಸುಮ್ಮನಿರಬೇಕು ಎಂದು ತಿರುಗೇಟು ನೀಡಿದರು.
ಎಂಪಿ ಚುನಾವಣೆಯಲ್ಲೂ ಜನ ತಕ್ಕ ಉತ್ತರ ನೀಡುತ್ತಾರೆ. ಕಾಂಗ್ರೆಸ್ ಸರ್ಕಾರ ಜನಸೇವೆಗಾಗಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯವರಿಗೆ ವಸೂಲಿ ಮಾಡಿದ ಅನುಭವವಿದೆ. ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಮಾಡೋ ಆರೋಪಕ್ಕೆ ಸಾಕ್ಷಿಗಳಿಲ್ಲ. ಮಾಜಿ ಸಚಿವ ಅಶ್ವತ್ಥ್ ನಾರಾಯಣ ಶೇ.40ರಲ್ಲಿ ಪಾಲುದಾರರಿರಬೇಕು ಎಂದು ದೂರಿದರು.
ಹಿಂದಿನ ಸರ್ಕಾರದ ಶೇ.40 ವಸೂಲಿ ದಂಧೆ ಕುರಿತು ಈಗಾಗಲೇ ಐವರು ಐಎಎಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ತಿಂಗಳಲ್ಲಿ ವರದಿ ನೀಡಲು ಸಿಎಂ ಸೂಚಿಸಿದ್ದಾರೆ. ಈ ಹಿಂದೆ ಬಿಜೆಪಿಗರು ಬಾಯಿ ತೆಗೆದರೆ ಮೋದಿ ನೋಡಿ ಮತ ನೀಡುವಂತೆ ಕೇಳುತ್ತಿದ್ದರು. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವರ ಮುಖ ನೋಡಿಯೂ ಜನ ಮತ ನೀಡಿಲ್ಲ ಎಂಬ ಕೊರಗು ಬಿಜೆಪಿಯವರಿಗೆ ಕಾಡುತ್ತಿದೆ ಎಂದು ಕುಹಕವಾಡಿದರು.
ಬೂದಗುಂಪಾದಲ್ಲಿನ ಘಟನೆಯನ್ನು ಹತೋಟಿಗೆ ತಂದಿದ್ದೇವೆ. ಗ್ರಾಪಂ ಅಧ್ಯಕ್ಷ ಸ್ಥಾನದ ಮೀಸಲಾತಿ ಸಂಬಂಧ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಘಟನೆಗೆ ಕಾರಣರಾದವರನ್ನು ಬಂಧಿಸುತ್ತೇವೆ ಎಂದರು.