ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ, ಡೆತ್ ನೋಟ್ ಗೆ ಬೆಲೆ ಇಲ್ಲವೇ?

5cbp2.jpg
Published on

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕರು ಹಾಗೂ ನಾಯಕರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಪ್ರಕರಣದ ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರನ್ನು ಕೈ ಬಿಟ್ಟಿರುವುದು ತನಿಖೆಯ ವೈಖರಿ ಮತ್ತು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹೇಗಿದೆ? ಎಂಬುದನ್ನು ತೋರಿಸುತ್ತದೆ ಎಂದು ಸಂಸದ ಡಾ ಕೆ.ಸುಧಾಕರ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರೋಪ, ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ ರಾಜ್ಯ ವಿಪಕ್ಷದ ನಾಯಕರಾಗಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮೋಟೋ ಕೇಸ್ ದಾಖಲಿಸಲು ಒತ್ತಾಯಿಸಿದ್ದರು. ಆದರೆ, ಈಗ ಡೆತ್ ನೋಟ್ ಇದ್ದರೂ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಪಕ್ಷಪಾತ ಧೋರಣೆ ತೋರಲಾಗುತ್ತಿದೆ. ಹಾಗಾದರೆ ಯುವಕನು ಬರೆದ ಪತ್ರಕ್ಕೆ ಬೆಲೆ ಇಲ್ಲವೇ? ಈಗಲೇ ಎಫ್‌ಐಆರ್‌ನಲ್ಲಿ ಆರೋಪಿಗಳಿಬ್ಬರ ಹೆಸರನ್ನು ಬಿಟ್ಟಿರುವುದು ಏನನ್ನು ಸೂಚಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೆಲವರು ಹನಿಟ್ರ್ಯಾಪ್‌ಗೆ ಬೀಳಿಸಲು ಯತ್ನಿಸಿದಕ್ಕೆ ಸಂಬಂಧಿಸಿದಂತೆ ಸ್ವತಃ ಸಚಿವರೇ ಸದನಲ್ಲಿ ಹೇಳಿದ್ದಾರೆ. ರಾಜಕೀಯ ಪ್ರಭಾವಿಗಳ ಕಿರುಕುಳದಿಂದ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ರಾಜ್ಯಪಾಲರ ಮೂಲಕ ಆಡಳಿತ ನಿರ್ವಹಣೆಯ ಬಗ್ಗೆ ಮೆಚ್ಚುಗೆಯ ಸುಳ್ಳು ಹೇಳಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೇ ಕಸ, ನೀರು, ಡಿಸೇಲ್‌ಗೂ ಸೆಸ್ ಹಾಕಲಾಗುತ್ತಿದೆ. ಹಾಲು, ಮುದ್ರಾಂಕ ಶುಲ್ಕ, ಬಸ್ ಪ್ರಯಾಣ ಮತ್ತು ವಿದ್ಯುತ್ ದರ ಸೇರಿದಂತೆ ಹಲವು ಬೆಲೆ ಹೆಚ್ಚಿಸಲಾಗಿದೆ. ಯಾವುದನ್ನೂ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಯೋಜನೆಗಳನ್ನು ಹಿನ್ನಡೆ ಕಂಡು ಬರುತ್ತಿದೆ ಎಂದರು.
ವಕ್ಫ್ ಹೆಸರಿನಲ್ಲಿ ಕೆಲವರು ಭೂಮಿ ಕಬಳಿಸಿದ್ದಾರೆ. ಮಂಡಳಿಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದು ಇದನ್ನರಿತು ಕೇಂದ್ರ ಸರ್ಕಾರವು ಬಡ ಮುಸ್ಲಿಮರಿಗೆ ನ್ಯಾಯ ಒದಗಿಸುವ ಉದ್ದೇಶದೊಂದಿಗೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಇದು ಮೊದಲಿನಿಂದಲೂ ಮುಸ್ಲಿಂ ಧರ್ಮದವರನ್ನು ವೋಟ್ ಬ್ಯಾಂಕಿಗೆ ಬಳಸಿಕೊಳ್ಳುತ್ತಿದೆ. ದೇಶದಲ್ಲಿನ ಮುಸ್ಲಿಮರಲ್ಲಿ ಎಷ್ಟು ಜನ ಶ್ರೀಮಂತರಿದ್ದಾರೆ? ಎಷ್ಟು ಜನ ಉನ್ನತ ಶಿಕ್ಷಣ ಪಡೆದಿದ್ದಾರೆ? ಸಾಮಾಜಿಕ ಪರಿಸ್ಥಿತಿ ಹೇಗಿದೆ? ಎನ್ನುವುದರ ಜತೆಗೆ ಹೆಚ್ಚಿನ ಸವಲತ್ತುಗಳನ್ನು ಕೇಂದ್ರ ಬಿಜೆಪಿ ಸರ್ಕಾರವು ಒದಗಿಸಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net