ಗೆಲುವು ಕಾಂಗ್ರೆಸ್ ದುರಾಡಳಿತಕ್ಕೆ ಸಂದೇಶ - ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ವಿಶ್ಲೇಷಣೆ - ಕಿಶೋರ್ ಕುಮಾರ್‌ಗೆ ಅಭಿನಂದನೆ

PTR_26 OCT_1
Published on

ಪುತ್ತೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಳೆದ ಬಾರಿಗಿಂತ ೧೦೪ ಮತಗಳು ಜಾಸ್ತಿ ಲಭಿಸಿದ್ದು, ಹಿಂದುತ್ವದಲ್ಲಿ ಹಾಗೂ ಸಂಘಟನಾತ್ಮಕವಾಗಿ ಗಟ್ಟಿ ಇದ್ದೇವೆ. ಹೆಚ್ಚುವರಿ ಮತ ಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ದ.ಕ., ಉಡುಪಿಯಿಂದ ಉತ್ತಮ ಸಂದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಚುನಾವಣೆಗಳಲ್ಲೂ ಬಿಜೆಪಿಗೆ ಗೆಲುವು ಲಭಿಸುವ ವಿಶ್ವಾಸ ಸಿಕ್ಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ನಗರದ ಜೈನ ಭವನದಲ್ಲಿ ಶನಿವಾರ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ವತಿಯಿಂದ ನೂತನ ವಿಧಾನಪರಿಷತ್ ಸದಸ್ಯರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಭಿನಂದನಾ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ ದ.ಕ. ಮತ್ತು ಉಡುಪಿ ಭಾಗದ ಪಂಚಾಯಿತಿ ಸದಸ್ಯರು, ಜನಪ್ರತಿನಿಽಗಳು ಜನರ ಭಾವನೆಯನ್ನು ಈ ಚುನಾವಣೆಯಲ್ಲಿ ತೋರ್ಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದರು.

ವಿಧಾನ ಪರಿಷತ್ ನೂತನ ಸದಸ್ಯ ಕಿಶೋರ್ ಕುಮಾರ್ ಅವರಿಗೆ ಹುಟ್ಟೂರ ಅಭಿನಂದನೆ ಮಾಡಲಾಯಿತು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜುರೆಮಾರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೆಟಿ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಬಕದಿಂದ ದರ್ಬೆವರೆಗೆ ವಾಹನ ಜಾಥಾ ನಡೆದು, ಅಲ್ಲಿಂದ ತೆರೆದ ವಾಹನದಲ್ಲಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.

ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರಸಭೆಯ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ಚುನಾವಣಾ ಸಂಚಾಲಕ ನಿತೀಶ್ ಕುಮಾರ್ ಶಾಂತಿವನ, ಸಹ ಸಂಚಾಲಕ ಸಂತೋಷ್ ರೈ ಕೈಕಾರ, ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್.ಗೌರಿ, ಬಿಜೆಪಿ ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಮತ್ತಿತರರು ಇದ್ದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಸ್ವಾಗತಿಸಿದರು. ಸುನಿಲ್ ದಡ್ಡು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net