ಜಿಲ್ಲಾ ಬಿಜೆಪಿ ವಿಭಜನೆ ; ತುಮಕೂರು ಜಿಲ್ಲೆಗೆ ಲಕ್ಷ್ಮೀಶ್ ; ಮಧುಗಿರಿಗೆ ಬಿ.ಕೆ.ಮಂಜುನಾಥ್ ಅಧ್ಯಕ್ಷ

bjp-pti
Published on

ತುಮಕೂರು: ಆಡಳಿತಾತ್ಮಕ, ಸಂಘಟನಾತ್ಮಕ ದೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯನ್ನು ತುಮಕೂರು ಹಾಗೂ ಮಧುಗಿರಿ ಜಿಲ್ಲೆಗಳನ್ನಾಗಿ ಇಬ್ಭಾಗ ಮಾಡಲಾಗಿದೆ. ಶೀಘ್ರದಲ್ಲಿ ಜಿಲ್ಲಾ ಸಮಿತಿಗಳು ಅಸ್ತಿತ್ವಕ್ಕೆ ಬರಲಿದ್ದು ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀಶ್ ಹಾಗೂ ಮಧುಗಿರಿ ಜಿಲ್ಲಾ ಘಟಕಕ್ಕೆ ಬಿ.ಕೆ.ಮಂಜುನಾಥ್ ಅವರನ್ನು ನೇಮಿಸಲಾಗಿದೆ.

11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 13 ಮಂಡಲಗಳನ್ನು ಹೊಂದಿರುವ ಜಿಲ್ಲಾ ಬಿಜೆಪಿಯನ್ನು ಸಂಘಟನಾತ್ಮಕ ದೃಷ್ಟಿಯಿಂದ ಎರಡು ಜಿಲ್ಲೆಗಳನ್ನಾಗಿ ಪ್ರತ್ಯೇಕಿಸಿ ಪಕ್ಷದ ಬಲವರ್ಧನೆಗೆ ಜಿಲ್ಲಾ ಕೋರ್ ಕಮಿಟಿ ನಿರ್ಧರಿಸಿ ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಹಾಲಿ ಜಿಲ್ಲಾ ಸಮಿತಿಯನ್ನು ವಿಸರ್ಜಿಸಲಾಗುವುದು. ಮೊದಲಿಗೆ ಅಧ್ಯಕ್ಷರನ್ನು ನೇಮಿಸುವುದರೊಂದಿಗೆ ಜಿಲ್ಲಾ ಸಮಿತಿಗಳ ರಚನೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲಾಧ್ಯಕ್ಷರಾಗಿ ಲಕ್ಷ್ಮೀಶ್, ಮಂಜುನಾಥ್: ತುಮಕೂರು ಜಿಲ್ಲೆ ವ್ಯಾಪ್ತಿಗೆ ತುಮಕೂರು ನಗರ, ಗ್ರಾಮಾಂತರ, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಶಿರಾ, ಪಾವಗಡ, ಕೊರಟಗೆರೆ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಸೇರಿ ಮಧುಗಿರಿ ಜಿಲ್ಲೆ ರಚಿಸಲಾಗಿದ್ದು, ತುಮಕೂರು ಜಿಲ್ಲೆಗೆ ಪಕ್ಷದ ವಿಭಾಗೀಯ ಸಹಪ್ರಭಾರಿ, ತಿಗಳ ಸಮಾಜದ ಲಕ್ಷ್ಮೀಶ್ ಹಾಗೂ ಮಧುಗಿರಿ ಜಿಲ್ಲೆಗೆ ಕುರುಬ ಸಮುದಾಯದ ಬಿ.ಕೆ.ಮಂಜುನಾಥ್ ಅವರನ್ನು ನೇಮಿಸಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

ಶೈಕ್ಷಣಿಕ ಜಿಲ್ಲೆಯಂತೆ ತುಮಕೂರು ಜಿಲ್ಲೆಯನ್ನು ಪಕ್ಷ ಸಂಘಟನೆ ದೃಷ್ಟಿಯಿಂದ ಬಿಜೆಪಿ ಇಬ್ಭಾಗ ಮಾಡಿದ್ದು ಪಕ್ಷಕ್ಕೆ ಶಕ್ತಿ ತುಂಬುವ, ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸುವ ಉದ್ದೇಶವೂ ಇದರಲ್ಲಿ ಅಡಗಿದೆ.

ಸುರೇಶಗೌಡ ಹಿಡಿತ ! : ಪಕ್ಷದೊಳಗಿನ ಬಣ ರಾಜಕಾರಣ, ಆಂತರಿಕ ಕಲಹದಿಂದ ಬೇಸತ್ತು 1 ವರ್ಷ 3 ತಿಂಗಳಲ್ಲೇ ಜಿಲ್ಲಾಧ್ಯಕ್ಷ ಸ್ಥಾನ ಪದತ್ಯಾಗ ಮಾಡಿದ್ದ ಸುರೇಶ್‌ಗೌಡ ಸ್ಥಾನಕ್ಕೆ ಅವರ ಆಪ್ತ ಲಕ್ಷ್ಮೀಶ್ ಅವರನ್ನು ನೇಮಿಸಲಾಗಿದ್ದು ಪಕ್ಷದೊಳಗೆ ಸುರೇಶಗೌಡ ಹಿಡಿತ ಮುಂದುವರೆದಿರುವುದು ಸ್ಪಷ್ಟವಾಗಿದೆ. ಆರ್‌ಎಸ್‌ಎಸ್ ಹಿನ್ನೆಲೆ, ಪಕ್ಷದೊಳಗಿನ ಜವಾಬ್ದಾರಿಯನ್ನು ಅಚ್ಟುಕಟ್ಟಾಗಿ ನಿಭಾಯಿಸಿರುವ ತಿಗಳ ಸಮುದಾಯದ ಲಕ್ಷ್ಮೀಶ್ ಮತ್ತೊಬ್ಬರ ಕೈಗೊಂಬೆಯಾಗದೆ ಪಕ್ಷದೊಳಗಿನ ಬಣಗಳನ್ನು ಒಗ್ಗೂಡಿಸಿ ಮುನ್ನಡೆಸಬೇಕಿದೆ.

7 ಮೋರ್ಚಾ ಪುನಾರಚನೆ : ಬಿಜೆಪಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳಾ, ಯುವ ಹಾಗೂ ರೈತ ಮೋರ್ಚಾ ಸೇರಿ 7 ಮೋರ್ಚಾಗಳ ಪುನಾರಚನೆಗೆ ಶೀಘ್ರ ಚಾಲನೆ ಸಿಗಲಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶಗಳು, ಹುದ್ದೆಗಳು ಸಿಗಲಿವೆ. ಆ ಮೂಲಕ ಪಕ್ಷ ಬಲವರ್ಧನೆಗೆ ಬಿಜೆಪಿಗೆ ಅನುಕೂಲವಾಗಿದೆ. ಉಪಚುನಾವಣೆಯಲ್ಲಿ ಶಿರಾದಲ್ಲಿ ಕಮಲ ಅರಳಿದ್ದು ಹೊರತುಪಡಿಸಿದರೆ ಇನ್ನು ಪಾವಗಡ, ಮಧುಗಿರಿ, ಕೊರಟಗೆರೆಯಲ್ಲಿ ಬಿಜೆಪಿ ಅತ್ಯಂತ ಬಲಹೀನವಾಗಿದೆ. ಈ ನಾಲ್ಕು ಕ್ಷೇತ್ರಗಳನ್ನೊಳಗೊಂಡ ಜಿಲ್ಲಾ ಸಮಿತಿ ಮೂಲಕ ಪಕ್ಷವನ್ನು ಬಲವರ್ಧನೆಗೊಳಿಸುವ ಉದ್ದೇಶ ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net