3 ದಶಕಗಳ ನಂತರ ಬಿಜೆಪಿ ಹೊಸ ಕಾರ್ಯಾಲಯ !; ಕಮಲಕೃಪದಲ್ಲಿನ್ನು ಪಕ್ಷದ ಚಟುವಟಿಕೆ ;  ನನಸಾಗದ ಸ್ವಂತ ಕಟ್ಟಡದ ಕನಸು

29Tmk_BJP_Office
Published on

ತುಮಕೂರು : ಜಿಲ್ಲಾ ಬಿಜೆಪಿ ಕಾರ್ಯಾಲಯವು 3 ದಶಕಗಳ ನಂತರ ಹೊಸ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಸ್ವಂತ ಕಟ್ಟಡ ಹೊಂದುವ ಜಿಲ್ಲಾ ಬಿಜೆಪಿ ಕನಸನ್ನು ಮತ್ತಷ್ಟು ಮುಂದೂಡಿದಂತಾಗಿದೆ.

ಕೆ.ಆರ್.ಬಡಾವಣೆಯಲ್ಲಿ ಕಿಷ್ಕಿಂಧೆಯಂತಿದ್ದ ಬಾಡಿಗೆ ಕಟ್ಟಡದಲ್ಲಿ 1991ರಲ್ಲಿ ಕಾರ್ಯಾರಂಭ ಮಾಡಿದ್ದ ಬಿಜೆಪಿ ಜಿಲ್ಲಾ ಕಾರ್ಯಾಲಯವು ಶಿವಕುಮಾರ ಸ್ವಾಮೀಜಿ ವೃತ್ತದ ಬಳಿಯ ಬಿ.ಎಚ್.ರಸ್ತೆಗೆ ಹೊಂದಿಕೊಂಡಿರುವ ಬಾಡಿಗೆ ಕಟ್ಟಡಕ್ಕೆ 30 ವರ್ಷಗಳ ನಂತರ ಸ್ಥಳಾಂತರಗೊಂಡಿದೆ. ಸುಸಜ್ಜಿತ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ‘ಕಮಲಕೃಪ’ದ ಪ್ರವೇಶೋತ್ಸವ ಅಂಗವಾಗಿ ಕಡೆಯ ಕಾರ್ತಿಕ ಮಾಸದ ಸೋಮವಾರ ಬೆಳಗ್ಗೆ 6.30ಕ್ಕೆ ಸಪ್ತಶುದ್ಧಿ, ಪುಣ್ಯಾಹವಾಚನ, ವಾಸ್ತುಪೂಜೆ ಬಳಿಕ ಬೆಳಗ್ಗೆ 7ಕ್ಕೆ ಗಣಪ ಹವನ, ಸತ್ಯನಾರಾಯಣಪೂಜೆ ಏರ್ಪಡಿಸಲಾಗಿತ್ತು.

ಸಚಿವರು ಭಾಗಿ: ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶ್‌ಗೌಡ, ಮಾಜಿ ಸಚಿವ ಸೊಗಡುಶಿವಣ್ಣ, ಮಾಜಿ ಶಾಸಕ ಬಿ.ಸುರೇಶಗೌಡ, ಎಂ.ಬಿ.ನಂದೀಶ್, ಲಕ್ಷ್ಮೀಶ್, ಹೆಬ್ಬಾಕರವಿ, ಸಂಪಿಗೆ ಶ್ರೀಧರ್, ಬಿ.ಕೆ.ಮಂಜುನಾಥ್, ಎಸ್.ಡಿ.ದಿಲೀಪ್ ಕುಮಾರ್, ಕೊಪ್ಪಲ್ ನಾಗರಾಜ್ ಸೇರಿದಂತೆ ಜಿಲ್ಲೆಯ ಪದಾಧಿಕಾರಿಗಳು, ಮುಖಂಡರುಗಳು ಹೊಸ ಕಾರ್ಯಾಲಯದ ಪ್ರವೇಶೋತ್ಸವದಲ್ಲಿ ಭಾಗಿಯಾಗಿದ್ದರು.

ನನಸಾಗದ ಸ್ವಂತ ಕಟ್ಟಡ ? ;ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಸ್ವಂತ ಕಟ್ಟಡ ಹೊಂದುವ ಕನಸು ಈವರೆಗೆ ನನಸಾಗಿಲ್ಲ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಕ್ಷವು ಆರ್ಥಿಕವಾಗಿ ಸದೃಢವಾಯಿತು. ಈ ಸಂದರ್ಭದಲ್ಲಿ ಸ್ವಂತ ಕಟ್ಟಡ ಹೊಂದುವ ಹಿನ್ನೆಲೆಯಲ್ಲಿ ಸಮಗ್ರ ವಿಕಾಸ್ ಟ್ರಸ್ಟ್ ಅಡಿ ಗಾರ್ಡನ್ ರಸ್ತೆಯಲ್ಲಿ ಸಿಎ ನಿವೇಶನದಲ್ಲಿ ಪಕ್ಷದ ಕಚೇರಿ ನಿರ್ಮಿಸಲು ನೀಲ-ನಕ್ಷೆ ರೂಪಿಸಲಾಯಿತು. 2014ರಲ್ಲಿ ಪಕ್ಷದ ಅಂದಿನ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಶಿ ಭೂಮಿಪೂಜೆ ಕೂಡ ನೆರವೇರಿಸಿದರು. 2019ರಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತಾದರೂ ಸ್ವಂತ ಕಟ್ಟಡ ಮಾತ್ರ ನಿರ್ಮಾಣವಾಗಲಿಲ್ಲ. ತಾಂತ್ರಿಕ ಕಾರಣದಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯ ನಿರ್ಮಾಣ ಸ್ಥಗಿತಗೊಂಡಿದೆ. ಹಾಗಾಗಿ, ಮತ್ತೆ ಬಾಡಿಗೆ ಕಟ್ಟಡಕ್ಕೆ ಕಾರ್ಯಾಲಯವನ್ನು ಸ್ಥಳಾಂತರಿಸಲಾಗಿದೆ.

1991ರಲ್ಲಿ ಆರಂಭವಾದ ಕಾರ್ಯಾಲಯ ; ಪಕ್ಷದ ಕಾರ್ಯಾಲಯಗಳಿಗೆ ಬಾಡಿಗೆ ಪಡೆಯುವಷ್ಟು ಬಿಜೆಪಿ ಆರ್ಥಿಕವಾಗಿ ಸದೃಢವಾಗಿರದ ದಿನಗಳಲ್ಲಿ ಕರಂಬಳ್ಳಿ ಸಂಜೀವಶೆಟ್ಟರು 1991ರಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಬೈಎಲೆಕ್ಷನ್‌ನಲ್ಲಿ ಗೆದ್ದ ಬಳಿಕ ಕೆ.ಆರ್.ಬಡಾವಣೆಯಲ್ಲಿ ಬಾಡಿಗೆ ಮನೆಯನ್ನು ಪಕ್ಷದ ಕಾರ್ಯಾಲಯಕ್ಕೆ ಪಡೆದಿದ್ದರು. ಆ ವೇಳೆ ಕಾ.ಬೋರಪ್ಪ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಸೊಗಡು ಶಿವಣ್ಣ ನಗರಾಧ್ಯಕ್ಷ, ಕೆ.ಪಿ.ಮಹೇಶ್ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. ಅಂದಿನಿಂದ ಕಿಷ್ಕಿಂಧೆಯಂತಿದ್ದ ಕಟ್ಟಡದಲ್ಲೇ ಪಕ್ಷದ ಕಾರ್ಯಾಲಯವಿತ್ತು.

ಕ್ಷಿಪ್ರ ಕಾರ್ಯಾಚರಣೆ ; ಪಕ್ಷದ ಕಚೇರಿ ಪ್ರವೇಶೋತ್ಸವ ಆಗಮಿಸಿದ್ದ ಮರಿ ಪುಡಾರಿಗಳು ಬಿ.ಎಚ್.ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದರು. ಈ ಬಗ್ಗೆ ಎಸ್ಪಿ ರಾಹುಲ್‌ಕುಮಾರ್ ಶಹಾಪೂರವಾಡ್ ಅವರಿಗೆ ಸಾರ್ವಜನಿಕರು ಗಮನಕ್ಕೆ ತರುತ್ತಿದ್ದಂತೆ, ತಕ್ಷಣವೇ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಸಂಚಾರ ಪೊಲೀಸರು ಕ್ಲಾಂಪ್ ಹಾಕಿದ್ದಲ್ಲದೆ, ದಂಡ ವಿಧಿಸಿ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net