ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ

bjp pRESS MEET
Published on

ಬೆಳಗಾವಿ: ವಿಧಾನಸಭೆಯಲ್ಲಿ ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ದುಂದುವೆಚ್ಚವಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಹಾಲಿ ಹೈಕೋರ್ಟ್ ನಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷ ಯು.ಟಿ. ಖಾದರ್ ನೇತೃತ್ವದಲ್ಲಿ ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರದ ಸಂಶಯ ಬಂದಿದೆ. ಎಲ್ಲ ಕಾಮಗಾರಿಗಳನ್ನು ತಮ್ಮ ಮಂಗಳೂರು ಮೂಲದ ಕಂಪನಿಯೊಂದಕ್ಕೆ ನೀಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕಾದ ಅಗತ್ಯವಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೂ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಈಚೆಗೆ ಪ್ರಧಾನಿ ನರೇಂದ್ರ ಮೋದಿಯವರು, ಭ್ರಷ್ಟಾಚಾರ ಆರೋಪದಲ್ಲಿ ಸಿಕ್ಕಿಬಿದ್ದ ಮುಖ್ಯಮಂತ್ರಿ ಮತ್ತು ಪ್ರಧಾನಿ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಚಾರಣೆ ಎದುರಿಸಬೇಕು ಎಂಬ ಕಾನೂನು ತಿದ್ದುಪಡಿ ಮಾಡಿದ್ದಾರೆ. ಇದರಲ್ಲಿ ಮುಂದೆ ವಿಧಾನಸಭಾ ಸಭಾಧ್ಯಕರುಗಳನ್ನೂ ಸೇರಿಸಿಕೊಳ್ಳಬೇಕು. ಖಾದರ್ ಅವರು, ಕಾಂಗ್ರೆಸ್ಸಿನ ಮಂತ್ರಿಗಳು ಭ್ರಷ್ಟಾಚಾರ ಮಾಡುತ್ತಿರುವಾಗ ನಾನು ಯಾಕೆ ಸುಮ್ಮನಿರಲಿ ಎಂದುಕೊಂಡು ಹೀಗೆ ಮಾಡಿರಬಹುದು. ಆದರೆ ಅವರು ಕುಳಿತುಕೊಳ್ಳುವ ಸ್ಥಾನ ಸಂವಿಧಾನಾತ್ಮಕವಾಗಿರುವ ಹುದ್ದೆ. ಅದಕ್ಕೆ ತುಂಬಾ ಗೌರವವಿದೆ. ಹಾಗಾಗಿ ನಾವು ಅವರ ಸ್ಥಾನಕ್ಕೆ ಗೌರವ ಕೊಟ್ಟು ಹೆಚ್ಚಿಗೆ ಟೀಕೆ ಮಾಡುವುದಿಲ್ಲ. ಅವರು ತನಿಖೆ ಎದುರಿಸಲು ಸಿದ್ಧರಾಗಬೇಕು. ಸರ್ಕಾರ ನ್ಯಾಯಮೂರ್ತಿಗಳ ಮೂಲಕವೇ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಸುಭಾಸ ಪಾಟೀಲ, ಗೀತಾ ಸುತಾರ, ರಾಜೇಂದ್ರ ಹರಕುಣಿ, ಸಚಿನ ಕಡಿ, ಸಂದೀಪ ದೇಶಪಾಂಡೆ, ಯಲ್ಲೇಶ ಕೋಲಕಾರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net