ಪಾಕ್, ಬಾಂಗ್ಲಾ ವಲಸಿಗರ ಗಡಿಪಾರಿಗೆ ಒತ್ತಾಯ

bjp
Published on

ಮಡಿಕೇರಿ:

ಉಗ್ರಗಾಮಿಗಳನ್ನು ಸದೆ ಬಡಿಯಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಕ್ರಮಗಳನ್ನೂ ಜಿಲ್ಲಾ ಬಿಜೆಪಿ ಬೆಂಬಲಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.

ಶಾಂತ ವಾತಾವರಣದಲ್ಲಿ ಇದ್ದ ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಉಗ್ರಗಾಮಿಗಳಿಂದ ಅಮಾಯಕ ಪ್ರವಾಸಿಗರ ಹತ್ಯೆ ಆಗಿದೆ. ಹಿಂದುಗಳನ್ನೇ ಗುರಿ ಮಾಡಿ ಹತ್ಯೆ ಮಾಡಲಾಗಿದೆ. ಇದಕ್ಕೆ ಪ್ರತ್ಯುತ್ತರ ಕೊಡಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ. ಇದಕ್ಕೂ ಮೊದಲು ದೇಶದ ಒಳಗೆ ಇರುವ ಪಾಕಿಸ್ತಾನ ಮತ್ತು ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಬೇಕು. ಆಂತರಿಕ ಭದ್ರತೆ ಇವರು ಸವಾಲು. ಈ ವಿಷಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ದೇಶ ವಿರೋಧಿ ಕೃತ್ಯ ತಡೆಯಲು ಬಿಜೆಪಿ ಕಾರ್ಯಕರ್ತರೂ ಸೈನಿಕರಂತೆ ಸಜ್ಜಾಗಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಜನಗಣತಿ ಸಂದರ್ಭ ಜಾತಿಗಣತಿಗೂ ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ಸಣ್ಣ ಸಣ್ಣ ಸಮುದಾಯಕ್ಕೂ ಸೌಲಭ್ಯ ಕೊಡಲು ಅನುಕೂಲ ಆಗಲಿದೆ ಎಂದರು.

ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಬೇರೆ ದೇಶಗಳೂ ಕೈ ಜೋಡಿಸಿವೆ. ಈ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೋಕ್ ಡ್ರಿಲ್ ಮಾಡಲಾಗುತ್ತಿದೆ. ಪಾಕಿಸ್ತಾನ ಭೂಪಟದಲ್ಲಿ ಇರಬಾರದು. ಇಂಥ ಕೆಲಸ ಕೇಂದ್ರ ಸರ್ಕಾರ ಮಾಡಬೇಕು.

2 ವರ್ಷ ಆದರೂ ಸ್ಥಳೀಯ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳಿಗೆ ಸ್ವತಂತ್ರವಾಗಿ ಅಧಿಕಾರ ಚಲಾವಣೆ ಮಾಡಲು ಬಿಡುತ್ತಿಲ್ಲ. ನ್ಯಾಯಯುತವಾಗಿ ಕೆಲಸ ಮಾಡಲೂ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಪೊಲೀಸ್‌ನವರು ಕಾಂಗ್ರೆಸ್ ಪೊಲೀಸ್ ಆಗಬಾರದು. ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಗೆ ಪೊಲೀಸರೇ ಸಹಕಾರ ಕೊಟ್ಟಂತಿದೆ. ಅಧಿಕಾರಿಗಳು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಶಾಸಕರು, ಕಾಂಗ್ರೆಸ್ ಕಾರ್ಯಕರ್ತರು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡಿದರೆ ವಿನಯ್ ಸೋಮಯ್ಯ ಪ್ರಕರಣಗಳು ಮರುಕಳಿಸುತ್ತದೆ ಎಂದರು.

ಎಂಎಲ್‌ಸಿ ಸುಜಾ ಕುಶಾಲಪ್ಪ ಮಾತನಾಡಿ ಕಾಶ್ಮೀರದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಹಿಂದುಗಳು ಎಂದು ನೋಡಿ ಹುಡುಕಿ ಹೊಡೆದಿದ್ದಾರೆ. ಕರ್ನಾಟಕ, ಕೊಡಗಿನಲ್ಲೂ ಅಕ್ರಮ ವಲಸಿಗರು ಇದ್ದಾರೆ. ಅವರನ್ನು ಹುಡುಕಿ ಅವರ ದೇಶಕ್ಕೆ ಕಳಿಸಬೇಕು. ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ತಳೂರು ಕಿಶೋರ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net