

ಕೋಲಾರ: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಜನಪ್ರಿಯ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಜನರಿಗೆ ತಿಳಿವಳಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಗಿರುವ ನೆಲೆ ಮತ್ತು ಬೇರು ಗಟ್ಟಿಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಹೇಳಿದರು.
ನಗರದ ಹೊರವಲಯದ ಕೋಗಿಲಹಳ್ಳಿಯಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಒಟ್ಟಾಗಿದ್ದರಿಂದ ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಲು ಸಾಧ್ಯವಾಗಿದೆ. ಇದನ್ನು ಉಳಿಸಿಕೊಳ್ಳುವ ಜತೆಗೆ ಮುಂದಿನ ಎಲ್ಲ ಹಂತದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಮಂದಿರ ನಿರ್ಮಾಣಕ್ಕೆ ಭಕ್ತರು ಹಣ, ಇಟ್ಟಿಗೆ, ಸಲಕರಣೆ ಒದಗಿಸಿದಂತೆ ದೇಶದಲ್ಲಿ ಬಿಜೆಪಿ ಕಾರ್ಯಾಲಯ ನಿರ್ಮಾಣಕ್ಕೆ ಕಾರ್ಯಕರ್ತರು ದೇಣಿಗೆ ನೀಡಿ ಪಕ್ಷ ಕಟ್ಟುತ್ತಿದ್ದಾರೆ ಎಂದರು.
ಕೋಲಾರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕಾರ್ಯಾಲಯ ನಿರ್ಮಿಸಲು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಮಂಡಲ ಮಟ್ಟದಲ್ಲೂ ಪಕ್ಷದ ಕಾರ್ಯಾಲಯ ಕಟ್ಟಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ರಾಮಕ್ಕ, ವೈ.ಸಂಪಂಗಿ, ಎ. ನಾಗರಾಜ್, ಮಾಜಿ ಜಿಲ್ಲಾಧ್ಯಕ್ಷರಾದ ಎಟ್ಟಕೋಡಿ ಕೃಷ್ಣರೆಡ್ಡಿ, ಲಕ್ಷ್ಮಯ್ಯ, ಜಿಲ್ಲಾ ಉಸ್ತುವಾರಿ ಗೀತಾ ವಿವೇಕ್‌ರೆಡ್ಡಿ, ಜಿಲ್ಲಾ ಸಂಘಟನಾ ಉಸ್ತುವಾರಿ ಕಾಂತರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಗುರುನಾಥ ರೆಡ್ಡಿ, ಸೂರ್ಯನಾರಾಯಣ ಕುಟ್ಟಿ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಇತರರು ಪಾಲ್ಗೊಂಡಿದ್ದರು.
ಜಿಲ್ಲಾ ಕಾರ್ಯಾಲಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕರು ವರ್ಚುವಲ್ ಸಭೆ ಮೂಲಕ ಶಿಲಾನ್ಯಾಸ ನರೆವೇರಿಸಿದರು.