

ಮಡಿಕೇರಿ:
ನಾಗರಿಕ ಸಮಾಜವೇ ತಲೆತಗ್ಗಿಸುವಂಥ ಶಬ್ದ ಬಳಸಿ ದೇಶದ ಮಹಾನ್ ಸೇನಾ ನಾಯಕರನ್ನು ನಿಂದಿಸಿರುವ ವ್ಯಕ್ತಿಯ ಹಿನ್ನೆಲೆಯನ್ನೂ ಪರಿಶೀಲಿಸಿ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಪೊಲೀಸರನ್ನು ಆಗ್ರಹಿಸಿದ್ದಾರೆ.
ಫೀ. ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ದೇಶದ ಮಹಾನ್ ನಾಯಕರು. ಇವರು ಒಂದು ಜನಾಂಗ ಅಥವಾ ಜಿಲ್ಲೆಗೆ ಸೀಮಿತವಾದ ವ್ಯಕ್ತಿಗಳಲ್ಲ. ಪ್ರಪಂಚದಾದ್ಯAತ ಆದರದಿಂದ ಗುರುತಿಸುವ, ನಾಗರಿಕ ಸಮಾಜ ಗೌರವದಿಂದ ಕಾಣುವ ಮಹಾನ್ ಚೇತನಗಳು ಇವರು. ಇಂಥವರನ್ನು ಘನತೆಯ ವಕೀಲ ವೃತಿಯಲ್ಲಿ ಇರುವಾತ ಅನಾಗರಿಕವಾಗಿ ನಿಂದಿಸುವ ಕೆಲಸ ಮಾಡಿದ್ದಾನೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆತ ಹಿಂದು ಧರ್ಮ, ಕೊಡಗಿನ ಆಚಾರ-ವಿಚಾರ ಟೀಕೆ ಮಾಡುವಾತ. ಈಗ ಮಹಾನ್ ಸೇನಾ ನಾಯಕರನ್ನು ನಿಂದಿಸುವ ಮೂಲಕ ದೇಶ ದ್ರೋಹದ ಕೆಲಸ ಮಾಡಿದ್ದಾನೆ. ಈತನನ್ನು ಪೊಲೀಸರು ಭಯೋತ್ಪಾದಕ ಎಂದು ಗುರುತಿಸಬೇಕಿತ್ತು. ಜನಾಂಗೀಯ ಸಂಘರ್ಷಕ್ಕೆ ದಾರಿ ಮಾಡಿಕೊಡುವಂತೆ ನಿಂದಿಸಿರುವ ಈತನ ಮೇಲೆ ಆಂತರಿಕ ಭದ್ರತಾ ಕಾಯಿದೆ ಹಾಕುವ ಮೂಲಕ ಸಮಾಜ ಘಾತುಕರಿಗೆ ಎಚ್ಚರಿಕೆಯ ಸಂದೇಶ ಕಳಿಸಬೇಕು. ಜನಾಂಗಿಯ ಸಂಘರ್ಷಕ್ಕೆ ದಾರಿ ಮಾಡಿ ಕೊಡುವವರನ್ನು ಮೂಲದಲ್ಲೇ ಚಿವುಟಿ ಹಾಕಬೇಕು. ಸಮಾಜಕ್ಕೆ ದ್ರೋಹ ಮಾಡಿದ ಈತ ಮಡಿಕೇರಿ ಬಾರ್ ಅಸೋಸಿಯೇಷನ್ ಸದಸ್ಯನೂ ಆಗಿದ್ದು, ಈತನ ವಿರುದ್ಧ ಮಡಿಕೇರಿ ಬಾರ್ ಅಸೋಸಿಯೇಷನ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ದೇಶಕ್ಕ ರಕ್ಷಣೆ ನೀಡುವಲ್ಲಿ ಕೊಡಗಿನ ಕೊಡುಗೆ ದೊಡ್ಡದು. ಸೈನಿಕರಿಂದ ಸೇನಾ ನಾಯಕರ ತನಕ ಸೇವೆ ಸಲ್ಲಿಸಿದವರು, ಈಗಲೂ ಸೇವೆಯಲ್ಲಿ ಇರುವವರು ಕೊಡಗಿನಲ್ಲಿ ಇದ್ದಾರೆ. ಸಮಾಜ ಘಾತುಕರು ಸಮಾಜದಲ್ಲಿ ಒಡಕು ಮೂಡಿಸುವ ದೃಷ್ಟಿಯಿಂದ ಬೇರೆಯವರ ಸಿಮ್ ಬಳಸಿಕೊಂಡು ಕೀಳು ಶಬ್ದಗಳಿಂದ ಮಹಾನ್ ಸೇನಾನಿಗಳನ್ನು ನಿಂದಿಸುವ ಕೆಲಸ ಮಾಡಿದ್ದಾರೆ. ಈ ಸಮಾಜ ಘಾತುಕ ಶಕ್ತಿಗಳು ಹಿಂದೆ ಏನು ಮಾಡಿದ್ದರು ? ಎ.ಕೆ. ಸುಬ್ಬಯ್ಯ ಅವರ ನಿಕಟವರ್ತಿ ಆಗಿದ್ದ ಈತ ಚುನಾವಣೆ ಸಮಯದಲ್ಲಿ ಯಾರ ಜತೆ ಗುರುತಿಸಿಕೊಂಡಿದ್ದರು ? ಯಾರ ಜತೆ ಓಡಾಡಿದ್ದಾರೆ ಎನ್ನುವುದೂ ಎಲ್ಲರಿಗೂ ಗೊತ್ತಿದೆ. ಇದರಿಂದ ಸಮಾಜದ ಬಗ್ಗೆ ಜನಪ್ರತಿನಿಧಿಗಳ ನಿಲುವು ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಸಮಾಜ ಒಡೆಯುವ ಇಂಥ ವ್ಯಕ್ತಿಯನ್ನು ಈ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಜಾತಿ ಮಧ್ಯೆ ಸಂಘರ್ಷ ತಂದಿಡುವ ಕೆಲಸಕ್ಕೆ ಪೊಲೀಸರು ಸಾಮಾನ್ಯ ಸೆಕ್ಷನ್ ಹಾಕಿರುವುದರಿಂದ ಬೇಲ್ ತೆಗೆದುಕೊಂಡು ಹೊರಬರುವಂತೆ ಆಗಿದೆ. ಜಿಲ್ಲೆಯ ಶಾಸಕರು ಪತ್ರಿಕೆಗಳ ಮೂಲಕ ಒತ್ತಡ ಹೇರಿದರೆ ಸಾಲದು. ಕೊಡಗಿನ ಬಗ್ಗೆ ಅಭಿಮಾನ ಇದ್ದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಬೇಕ ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಲನ್ ಕುಮಾರ್, ಮಹೇಶ್ ಜೈನಿ, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಹ್ಮಣಿ, ವಕ್ತಾರ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.