ಮೌನಕ್ಕೆ ಶರಣಾದ ಬಿಜೆಪಿ

18mdk01 robin
Published on

ಮಡಿಕೇರಿ:

ಕನಸಲ್ಲೂ ಊಹಿಸದ ಸೋಲು ಬಿಜೆಪಿಯನ್ನು ಮೌನಕ್ಕೆ ದೂಡಿದೆ. ೩ ದಶಕಗಳ ಅದಿಪತ್ಯ ಕಾಂಗ್ರೆಸ್ ಪಾಲಾಗಿರುವುದು ಪಕ್ಷದ ಕಾರ್ಯಕರ್ತರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ನಾಯಕರೂ ಆಘಾತದಿಂದ ಹೊರಬಂದಿಲ್ಲ. ಎಲ್ಲರೂ ಈಗ ಆತ್ಮವಿಮರ್ಶೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಚುನಾವಣೆಗಳಲ್ಲಿ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ. ಈ ಸಂಬಂಧ ಸದ್ಯದಲ್ಲೇ ಸಭೆಯೊಂದನ್ನು ಕೂಡ ಕರೆಯಲಾಗಿದೆ.

ಶನಿವಾರ (ಮೇ ೧೩) ಮತ ಎಣಿಕೆ ಸಂದರ್ಭ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ೮ ಸುತ್ತಗಳ ಎಣಿಕೆ ತನಕವೂ ಮುನ್ನಡೆ ಕಾಯ್ದುಕೊಂಡಿದ್ದರು. ಅಲ್ಲಿಯ ತನಕ ಬಿಜೆಪಿ ಪಾಳೆಯವೂ ಮತ ಎಣಿಕೆ ಕೇಂದ್ರದಲ್ಲಿ ಅತ್ತಿಂದಿತ್ತ ಎದೆಯುಬ್ಬಿಸಿ ನಡೆಯುತ್ತಿತ್ತು. ೯ ನೇ ಸುತ್ತಿನ ಮತ ಎಣಿಕೆ ನಂತರ ಕಾಂಗ್ರೆಸ್‌ನ ಕೈ ಮೇಲಾಯಿತು. ನಂತರ ಅವರು ಹಿಂತಿರುಗಿ ನೋಡದಂತೆ ಮುಂದಡಿ ಇಡಲಾರಂಭಿಸಿದ್ದರು. ಇತ್ತ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು. ಡಾ. ಮಂಥರ್ ಗೌಡ ಎಲ್ಲೂ ರಂಜನ್ ಮುಂದಕ್ಕೆ ಹೋಗಲು ಅವಕಾಶವನ್ನೇ ನೀಡಿರಲಿಲ್ಲ. ಆದರೆ ಎರಡು ಕ್ಷೇತ್ರಗಳಲ್ಲೂ ಮುನ್ನಡೆಯ ಅಂತರ ತುಂಬಾ ಕಡಿಮೆ ಇತ್ತು.

ಎದುರಾಳಿ ಅಭ್ಯರ್ಥಿಯ ಮುನ್ನಡೆ ಅಂತರ ಕಡಿಮೆ ಇದ್ದ ಕಾರಣ ಬಿಜೆಪಿಯವರು ಕೊನೆಯ ೩ ಸುತ್ತಗಳ ತನಕವೂ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಚಿಕ್ಕ ಅಂತರವಾದರೂ ಸರಿ ಗೆಲವು ತಮ್ಮ ಪಾಲಾಗುತ್ತದೆ ಎನ್ನುವ ಆಸೆ ಹಾಗೆಯೇ ಉಳಿದುಕೊಂಡಿತ್ತು. ಹಾಗಾಗಿಯೇ ಅಪ್ಪಚ್ಚು ರಂಜನ್ ಮತ ಎಣಿಕೆ ಕೇಂದ್ರದಲ್ಲಿ ಕೊನೆಯ ತನಕವೂ ಇದ್ದರು. ಎಣಿಕೆ ಕೇಂದ್ರಕ್ಕೆ ಬಂದಿರದಿದ್ದ ಕೆ.ಜಿ. ಬೋಪಯ್ಯ ಅವರನ್ನೂ ಕರೆಸುವ ಪ್ರಯತ್ನ ನಡೆದಿತ್ತು. ಆದರೆ ೧೯ನೇ ಸುತ್ತಿನ ಎಣಿಕೆ ಮುಗಿಯುವ ವೇಳೆಗೆ ಎಲ್ಲಾ ನಿರೀಕ್ಷೆಗಳು ಠುಸ್ ಆಗಿದ್ದವು. ಗೆಲವಿನ ಅಲ್ಪ ಸ್ವಲ್ಪ ಆಸೆಯೂ ಕಮರಿಹೋಗಿತ್ತು. ೩ ದಶಕಗಳ ಕೊಡಗಿನ ಬಿಜೆಪಿ ಸಾಮ್ರಾಜ್ಯ ಅಷ್ಟರಲ್ಲಾಗಲೇ ಕಾಂಗ್ರೆಸ್ ಪಾಲಾಗಿಬಿಟ್ಟಿತ್ತು.

ಈ ಆಘಾತದಿಂದ ಬಿಜೆಪಿನ ಇನ್ನೂ ಹೊರಬಂದಿಲ್ಲ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಿಂದ ಲೋಕಸಭೆ ಸದಸ್ಯ ಸ್ಥಾನದ ತನಕವೂ ಅಧಿಕಾರ ನಡೆಸುವ ಮೂಲಕ ಭದ್ರಕೋಟೆ ಕಟ್ಟಿಕೊಂಡಿದ್ದ ಪಕ್ಷಕ್ಕೆ ತನ್ನ ಕೋಟೆ ವಿಧಾನಸಭೆ ಚುನಾವಣೆಯಲ್ಲಿ ೨ ಕ್ಷೇತ್ರಗಳಲ್ಲೂ ಸೋಲುವ ಮೂಲಕ ಛಿದ್ರವಾಗಿರುವುದನ್ನು ಕಲ್ಪಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ತಮ್ಮದೇ ಸಾಮ್ರಾಜ್ಯ ಎನ್ನುವಂತೆ ಈ ಹಿಂದೆ ಕಾಂಗ್ರೆಸ್, ಜೆಡಿಎಸ್‌ನವರನ್ನೆಲ್ಲಾ ಆಗಾಗ್ಗೆ ಛೇಡಿಸುತ್ತಾ ತಿರುಗಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಮನೆಯಲ್ಲಿ ಮೌನವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಉದ್ದುದ್ದ ಟೈಪಿಸುತ್ತಿದ್ದವರ ಕೈ ಬೆರಳುಗಳೂ ಈಗ ಓಡುತ್ತಿಲ್ಲ.

ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಆಡಳಿತ ಒಂದು ಹಂತಕ್ಕೆ ತಲುಪುತ್ತಿದ್ದಂತೆಯೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಚುನಾವಣೆ ಘೋಷಣೆ ಆಗುವ ಎಲ್ಲಾ ಸಾಧ್ಯತೆಗಳಿದೆ. ಇನ್ನು ಒಂದು ವರ್ಷ ಕಳೆದರೆ ಲೋಕಸಭಾ ಚುನಾವಣೆಯೂ ಹತ್ತಿರ ಬರುತ್ತದೆ. ಹಾಗಾಗಿ ಈಗಿನ ಸೋಲನ್ನೇ ನೆನಪಿಸಿಕೊಂಡು ಕೊರಗುತ್ತಿದ್ದರೆ ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಮತ್ತಷ್ಟು ಹಾನಿ ಆಗಬಹುದು ಎನ್ನುವ ಕಾರಣಕ್ಕೆ ಪ್ರಮುಖ ನಾಯಕರು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಿಜೆಪಿಯ ಆರಂಭದ ದಿನಗಳು ಮತ್ತು ಈಗಿನ ಸ್ಥಿತಿ ಈ ನಡುವಿನ ಅವಧಿಯಲ್ಲಿ ಆಗಿರುವ ಏಳು, ಬೀಳುಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಚುನಾವಣೆ ಎಂದಾಗ ಸೋಲು ಮತ್ತು ಗೆಲುವು ಸಾಮಾನ್ಯ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಮುನ್ನಡೆಯುವ ಸೂತ್ರವನ್ನು ಬಿಜೆಪಿ ಪ್ರಮುಖರು ಕಾರ್ಯಕರಿಗೆ ಮನನ ಮಾಡಿಕೊಡುತ್ತಿದ್ದಾರೆ. ರಾಜ್ಯದ ಕೆಲವೆಡೆ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ಅನಾಥ ಭಾವ ಬಾರದಂತೆ ಮುಖಂಡರು ಧೈರ್ಯ ತುಂಬುವ ಕೆಲಸವೂ ನಡೆದಿದೆ. ಸೋಲಿನ ಕಾರಣಗಳ ಬಗ್ಗೆ ಸ್ಥಳೀಯವಾಗಿ ಅಲ್ಲಲ್ಲಿ ಅನೌಪಚಾರಿಕವಾಗಿ ಚರ್ಚೆಗಳು ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ನಡೆಯುತ್ತಿದೆ. ’ನಾವು ಸೋತರೂ ಕಳೆದ ಚುನಾವಣೆಗಿಂತ ಹೆಚ್ಚಿನ ಮತ ಗಳಿಸಿದ್ದೇವೆ,’ ಎನ್ನುವ ಕಾರಣಕ್ಕೆ ಬಿಜೆಪಿಗರು ಸದ್ಯಕ್ಕೆ ಸಮಧಾನಪಟ್ಟುಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಸದ್ಯದಲ್ಲೇ ಬಿಜೆಪಿ ಸಭೆಯೊಂದು ನಡೆಯಲಿದೆ. ಅಭ್ಯರ್ಥಿಗಳು ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಳ್ಳಲಿರುವ ಈ ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಏನು ಕಾರಣ ಎನ್ನುವುದರ ವಿಸ್ತತ ಚರ್ಚೆ ನಡೆಯಲಿದೆ. ಮುಂಬರುವ ಜಿ.ಪಂ., ತಾ.ಪಂ. ಹಾಗೂ ಲೋಕಸಭಾ ಚುನಾವಣೆಗೆ ಪಕ್ಷದ ಸಿದ್ಧತೆ ಮತ್ತು ಈ ಚುನಾವಣೆಯಲ್ಲಿ ಪಕ್ಷದ ಬಲವರ್ಧನೆ ಹೇಗೆ ಮಾಡುವುದು ಎನ್ನುವುದರ ಕುರಿತು ಕೂಡ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಇದಕ್ಕೆ ಪೂರ್ವಭಾವಿಯಗಿ ಗುರುವಾರ (ಮೇ೧೮) ಗೋಣಿಕೊಪ್ಪಲಿನಲ್ಲಿ ವಿರಾಜಪೇಟೆ ಕ್ಷೇತ್ರದ ಸಭೆ ಕರೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಪಕ್ಷದ ಮೂಲಗಳು ಖಚಿತಪಡಿಸಿಲ್ಲ. ಜಿಲ್ಲಾ ಮಟ್ಟದ ಸಭೆಗೆ ಇನ್ನಷ್ಟೇ ದಿನಾಂಕ ನಿಗದಿ ಆಗಬೇಕಿದೆ.

ಬಿಜೆಪಿ ವಾಟ್ಸಪ್ ಗ್ರೂಪ್‌ಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎನ್ನಲಾದ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪಕ್ಷದ ಕೆಲವು ಕಾರ್ಯಕರ್ತರು ಬಿಜೆಪಿ ಇತರ ಕಾರ್ಯಕರ್ತರ ಜತೆಗಿದ್ದುಕೊಂಡೇ ಬೇರೆ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ ಎನ್ನುವ ಆರೋಪಗಳು ಸಾಮಾನ್ಯವಾಗಿದೆ. ’ಇಂತಹ ದ್ರೋಹಿಗಳಿಂದಲೇ ಕೊಡಗಿನ ಎರಡು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳಬೇಕಾಯಿತು. ಈ ರೀತಿಯ ಕೆಲಸ ಮಾಡಿದವರು ಬಿಜೆಪಿ ಗ್ರೂಪ್‌ಗಳಿಂದ ಅವರಾಗಿಯೇ ಬಿಟ್ಟು ತೊಲಗಲಿ, ಪಕ್ಷಕ್ಕೂ ಅಂಥವರು ಬೇಡ,’ ಎನ್ನುವ ಒತ್ತಾಯದ ಧ್ವನಿ ಗ್ರೂಪ್‌ಗಳಲ್ಲಿ ಪ್ರತಿಧ್ವನಿಸುತ್ತಿದೆ. ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವವರನ್ನು ಬಿಜೆಪಿ ನಾಯಕರು ಕೂಡ ಗಮನಿಸುತ್ತಿದ್ದು, ಆರೋಪ ಸಾಬೀತಾದರೆ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದಾರೆ.

ಹಿಂದಿನ ಚುನಾವಣೆಗೆ ಹೋಲಿಸಿದರೆ ನಮಗೆ ಹೆಚ್ಚು ಮತಗಳು ಬಂದಿದೆ. ವಿರೋಧಿ ಮತಗಳು ಕಾಂಗ್ರೆಸ್ ಕಡೆಗೆ ಕ್ರೋಢೀಕರಣಗೊಂಡಿದ್ದರಿಂದ ಸೋಲಾಯಿತು. ಈ ಸಂಬಂಧ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಚರ್ಚೆಗೆ ಸದ್ಯದಲ್ಲೇ ಸಭೆ ಸೇರಲಾಗುತ್ತದೆ. ಮುಂಬರುವ ತಾ.ಪಂ., ಜಿ.ಪಂ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪುಟಿದೇಳುತ್ತೇವೆ.
ರಾಬಿನ್ ದೇವಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿರುವುದಕ್ಕೆ ಬಿಜೆಪಿ ಕಾರ್ಯಕರ್ತರು, ಹಿಂದೂವಾದಿಗಳು ಧೃತಿಗೆಡಬೇಕಾಗಿಲ್ಲ. ತಾಯಿ ಭಾರತಿಯ ಸ್ವಾಭಿಮಾನದ ರಕ್ಷಣೆಗಾಗಿ ಹೋರಾಡುತ್ತಿರುವ ಅಸಂಖ್ಯ ಕಾರ್ಯಕರ್ತರ ತಂಡ ನಮ್ಮದು. ಗೆದ್ದಾಗ ಹಿಗ್ಗುವುದೂ ಇಲ್ಲ, ಸೋತಾಗ ಕುಗ್ಗುವುದೂ ಇಲ್ಲ. ಮತ್ತೆ ಪುಟಿದೇಳುತ್ತೇವೆ. ಮತ್ತಷ್ಟು ವಿಶ್ವಾಸದೊಂದಿಗೆ ದೃತಿಗೆಡದೆ ಬಿಜೆಪಿ ಮತ್ತೆ ಕಟ್ಟುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ಕೂಡ ಸೋಲು ಅನುಭವಿಸಿದ್ದರು.
ಶಾಂತೆಯಂಡ ರವಿ ಕುಶಾಲಪ್ಪ, ಮಾಜಿ ಅಧ್ಯಕ್ಷ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net