

ಮಂಡ್ಯ: ಮರ್ಮಾಂಗವನ್ನು ಕತ್ತರಿಸುವಂತೆ ವಿದ್ಯಾರ್ಥಿಯನ್ನು ಪ್ರೇರೇಪಿಸಿದ್ದ ವಿಕೃತ ಮನಸ್ಸಿನ ಆರೋಪಿಯನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕ ನೀಡಿದ ಹೇಳಿಕೆ ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮರ್ಮಾಂಗ ಕತ್ತರಿಸಿದ್ದ ಪ್ರಕರಣದ ಹಿನ್ನೆಲೆ ಅನಾವರಣಗೊಂಡಿದ್ದು, ವಿಕೃತ ಕಾಮ ಪುರಾಣದ ವಿವರ ಬಹಿರಂಗವಾಗಿದೆ.
ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಕುಮಾರ್ ಅಲಿಯಾಸ್ ಸುನಿ(28) ಬಂಧಿತ ಆರೋಪಿ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ನಡೆದ ಘಟನೆಯ ವಿವರ ನೀಡಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾಹಿತಿ ಪ್ರಕಾರ, ಸುನಿಲ್ ಸಲಿಂಗಕಾಮಿ. ಪ್ರತಿಶುಕ್ರವಾರ ಈ ಬಾಲಕನನ್ನು ತನ್ನ ಜತೆಯಲ್ಲಿ ದೇವಾಲಯಗಳಿಗೆ ಕರೆದೊಯ್ಯುತ್ತಿದ್ದ. ಅಲ್ಲದೆ, ತನಗೆ ದೇವರು ಮೈಮೇಲೆ ಬರುತ್ತದೆ ಎಂದೂ ನಂಬಿಸಿದ್ದ. ಮುಂದೆ ದೊಡ್ಡವನಾದ ಬಳಿಕ ಮದುವೆ ಮಾಡಿಕೊಳ್ಳಬಾರದು. ತನ್ನ ಜತೆಯಲ್ಲೇ ಇರಬೇಕು ಎಂದು ಬಾಲಕನನ್ನು ಹೆದರಿಸಿದ್ದ.
ಮುಗ್ಧ ಬಾಲಕ ಈತ ಹೇಳಿದ್ದೆಲ್ಲವನ್ನೂ ನಂಬಿದ್ದ. ಅಲ್ಲದೇ ತಾನು ಹೇಳಿದ್ದನ್ನು ಬಾಲಕ ಪಾಲಿಸುವಂತೆಯೂ ಮಾಡಿಕೊಂಡಿದ್ದ. ಇದರಂತೆ ಮರ್ಮಾಂಗವನ್ನು ಕೊಯ್ದುಕೊಳ್ಳುವಂತೆ ಬಾಲಕನನ್ನು ಪ್ರೇರೇಪಿಸಿದ್ದ. ಈ ರೀತಿ ಮಾಡಿದರೆ ನಿನಗೆ ಮನೆಯವರು ಮದುವೆ ಮಾಡುವುದಿಲ್ಲ ಎಂದೂ ಬಾಲಕನನ್ನು ನಂಬಿಸಿದ್ದ. ಇದರಂತೆ, ಆ ಬಾಲಕ ತನ್ನ ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಈ ಘಟನೆ ಫೆ.14ರಂದು ನಡೆದಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ, ಫೆ.14ರಂದು ಡ್ರಾಪ್ ಕೊಡುವ ನೆಪದಲ್ಲಿ ಮೂವರು ದುಷ್ಕರ್ಮಿಗಳು ತನ್ನನ್ನು ಕಾರಿನಲ್ಲಿ ಕೂರಿಸಿ ಕರೆದೊಯ್ದು ಮರ್ಮಾಂಗ ಕತ್ತರಿಸಿದ್ದಾರೆ. ನಂತರ ಕಾರಿನಿಂದ ಇಳಿಸಿ ಹೋಗಿದ್ದಾರೆ ಎಂದು ಬಾಲಕ ಹೇಳಿಕೊಂಡಿದ್ದಾನೆ. ಇನ್ನಷ್ಟು ವಿಚಾರಣೆ ವೇಳೆ ನಿಜಾಂಶ ಹೊರಬೀಳಲಿದೆ