

ಹೊಸದುರ್ಗ: ಜೀನವದಲ್ಲಿನ ಸಿಹಿ-ಕಹಿ ಹಾಗೂ ಪರಿಸರದಲ್ಲಿನ ಅಪರೂಪದ ಕ್ಷಣಗಳನ್ನು ಶಾಶ್ವತವಾಗಿ ಫೋಟೋಗಳಲ್ಲಿ ಕಟ್ಟಿಕೊಡುವ ಛಾಯಾಗ್ರಹಕರ ಬದುಕು ಹಸನಾಗಬೇಕಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಪೋಟೋ ಮತ್ತು ವೀಡಿಯೋಗ್ರಾಫರ್ಸ್ ವೆಲ್‌ಫೇರ್ ಅಸೋಸಿಯೇಷನ್ ಪಟ್ಟಣದ ಜಯದೇವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಛಾಯಾಗ್ರಾಹಕರ ಸಂಘದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಶ್ವತವಲ್ಲದ ಮನುಷ್ಯನ ಬದುಕಿನ ಕ್ಷಣಗಳನ್ನು, ಮಧುರವಾದ ನೆನಪುಗಳನ್ನು ಚಿತ್ರಗಳು ಶಾಶ್ವತಗೊಳಿಸುತ್ತವೆ. ನಮ್ಮಿಂದ ಮರೆಯಾದವರನ್ನು ಸದಾ ನೆನಪಿನಲ್ಲಿಡುವ ಕೆಲಸ ಮಾಡುತ್ತವೆ ಎಂದರು.
ಸಂಘದ ಕಾರ್ಯಚಟುವಟಿಕೆಗೆ ಕಚೇರಿಯ ಅವಶ್ಯಕವಾಗಿದ್ದು, ನಿವೇಶನವನ್ನು ಸರ್ಕಾರದ ವತಿಯಿಂದ ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ. ಆರ್ಥಿಕವಾಗಿ ಹಿಂದುಳಿದರುವ ಛಾಯಾಗ್ರಾಹಕರಿಗೆ ಆಶ್ರಯ ಯೋಜನೆಯಡಿ ಮನೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಉದ್ಯಮಿ ಡಿ.ಎಸ್.ಪ್ರದೀಪ್ ಮಾತನಾಡಿ, ಹೊಸದುರ್ಗದಲ್ಲಿ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಸಮಾಜಮುಖಿ ಚಿಂತನೆಗಳಿಂದ ಕೆಲಸ ಮಾಡುತ್ತಿರುವುದು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಗೌರೀಶ್ ಅಕ್ಕಿ ಮಾತನಾಡಿ, ವೃತ್ತಿಯಲ್ಲಿರುವ ಎಲ್ಲರೂ ಒಳ್ಳೆಯ ಪೋಟೋಗ್ರಾಫರ್ ಅಗಲು ಸಾಧ್ಯವಿಲ್ಲ. ಅದರೆ, ಅವಕಾಶಗಳನ್ನು ಉಪಯೋಗಿಸಿಕೊಳ್ಳುವರು, ತಂತ್ರಜ್ಞಾನ ತಿಳಿದುಕೊಳ್ಳುವವರು ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ನಟ ಚೇತನ್ ಅಹಿಂಸಾ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಮಂಜುಯಾದವ್, ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ, ನಾಗೇಶ್ ಮತ್ತಿತರಿದ್ದರು.