

ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತು ಬಳಕೆ ಮತ್ತು ಮಾರಾಟ ವಿರುದ್ಧ ಜಿಲ್ಲಾ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದ್ದು, ಕಳೆದ ಎರಡು ವಾರದಲ್ಲಿ 73.39 ಲಕ್ಷ ರೂ., ಮೌಲ್ಯದ ವಿವಿಧ ಬಗೆಯ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ವಿದ್ಯಾರ್ಥಿನಿ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ತಿಳಿಸಿದರು.
ಮೂರು ಪ್ರಮುಖ ಪ್ರಕರಣಗಳನ್ನು ಕಳೆದ ಎರಡು ವಾರಗಳಲ್ಲಿ ಬೇಧಿಸಲಾಗಿದ್ದು, ನಿಷೇಧಿತ ಎಂಡಿಎಂಎ 30.57 ಲಕ್ಷ ರೂ., ಮೌಲ್ಯದ 540 ಗ್ರಾಂ ತೂಕದ 1019 ಮಾತ್ರೆಗಳು, 30 ಲಕ್ಷ ರೂ. ಮೌಲ್ಯದ ಎಲ್‌ಎಸ್‌ಡಿ ಸ್ಟಾಂಪ್ಸ್, 3 ಲಕ್ಷ ರೂ., ಮೌಲ್ಯದ 30 ಗ್ರಾಂ ಬ್ರೌನ್‌ಶುಗರ್, 9.82 ಲಕ್ಷ ರೂ., ಮೌಲ್ಯದ 131 ಗ್ರಾಂ ತೂಕದ ಸುಪಿರೀಯರ್ ಕ್ವಾಲಿಟಿ ಹೈಡ್ರೋವೀಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಜಿಲ್ಲೆಯನ್ನು ಮಾದಕಮುಕ್ತವಾಗಿಸಲು ಪೊಲೀಸ್ ಇಲಾಖೆ ಪಣತೊಟ್ಟಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ ತಾಂತ್ರಿಕ ತಂಡ, ಕಾರ್ಯಾಚರಣೆ ತಂಡ, ತನಿಖಾ ತಂಡ ಸೇರಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದರು.
ತಾಂತ್ರಿಕ ತಂಡದಲ್ಲಿ ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್, ಕಾರ್ಕಳ ಪೊಲೀಸ್ ಉಪಾಧೀಕ್ಷಕ ಭರತ್ ಎಸ್. ರೆಡ್ಡಿ, ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ಶಿವಾನಂದ್, ನಿತಿನ್, ದಿನೇಶ್ ಇದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ್, ಉಪ ನಿರೀಕ್ಷಕ ರಾಜಶೇಖರ ವಂದಲಿ, ಸಿಬ್ಬಂದಿ ಶೈಲೇಶ್, ಪ್ರಸನ್ನ, ಥೋಮ್ಸನ್, ಅಬ್ದುಲ್ ರಝಾಕ್, ಆದರ್ಶ, ಸಲ್ಮಾನ್ ಖಾನ್, ವಿಜಯ ಕುಮಾರ್, ರಾಜು, ಸತೀಶ್ ಇದ್ದಾರೆ. ತನಿಖಾ ತಂಡದಲ್ಲಿ ಡಿವೈಎಸ್‌ಪಿ ಜೈಶಂಕರ್, ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ, ಮಹೇಶ್ ಪ್ರಸಾದ್, ಮಂಜುನಾಥ್, ಡಿಸಿಐಬಿ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್., ಬ್ರಹ್ಮಾವರ ಎಸ್‌ಐ ರಾಘವೇಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು. ಎಲ್ಲ ಕಾರ್ಯಾಚರಣೆಗಳಲ್ಲಿ ಎಸ್‌ಐಡಿ ಉಡುಪಿ ಘಟಕದ ಪೊಲೀಸ್ ನಿರೀಕ್ಷಕ ಮಧು, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸಹಕಾರ ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ , ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್, ಕುಂದಾಪುರ ಉಪಾಧೀಕ್ಷಕ ಭರತ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.
ಯುರೋಪ್‌ನಿಂದ ಉಡುಪಿಗೆ ಡ್ರಗ್ಸ್ !
ಬಂಧಿತ ಆರೋಪಿಗಳೆಲ್ಲರೂ ವಿದ್ಯಾರ್ಥಿಗಳಾಗಿದ್ದು, ಇವರ ಸಂಪರ್ಕ ಮೂಲ ಪತ್ತೆಹಚ್ಚಲಾಗುತ್ತಿದೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಡಾರ್ಕ್‌ವೆಬ್‌ಸೈಟ್‌ಗಳಲ್ಲಿ ಯುರೋಪ್ ದೇಶಗಳಿಂದ ಬಿಟ್‌ಕಾಯಿನ್ ವ್ಯವಹಾರದ ಮೂಲಕ ಡ್ರಗ್ಸ್‌ಗಳನ್ನು ಖರೀದಿ ಮಾಡಿ ಇಲ್ಲಿ ಮಾರಾಟ ಮಾಡುತ್ತಿದ್ದರು. ಇನ್ನೂ ವಿವಿಧ ರೀತಿಯಲ್ಲಿ ತನಿಖೆ ಮತ್ತು ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್‌ಗಳಲ್ಲಿ ಮತ್ತು ಖಾಸಗಿ ಸ್ಥಳಗಳಲ್ಲಿ ನಡೆಯುವ ಪಾರ್ಟಿಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎಂದು ಎಸ್ಪಿ ತಿಳಿಸಿದರು.
31 ಪ್ರಕರಣ 61 ಮಂದಿ ಅರೆಸ್ಟ್
ಜಿಲ್ಲೆಯಲ್ಲಿ ಈ ವರ್ಷ ಅ.16ರವರೆಗೆ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 31 ಪ್ರಕರಣಗಳಲ್ಲಿ 61 ಮಂದಿಯನ್ನು ಬಂಧಿಸಿ, 93,46,400 ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸೇವನೆ ಸಂಬಂಧ 211 ಪ್ರಕರಣಗಳಲ್ಲಿ 234 ಮಂದಿಯನ್ನು ಬಂಧಿಸಲಾಗಿದೆ. ಹೀಗೆ ಒಟ್ಟು 242 ಪ್ರಕರಣಗಳಲ್ಲಿ 294 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು. ಗಾಂಜಾ ಸೇವನೆಗೆ ಸಂಬಂಧಿಸಿ ಬಂಧಿತರನ್ನು ರಿವರ್ಸ್ ತನಿಖೆಗೆ ಒಳಪಡಿಸಿದಾಗ ಇವರಿಗೆ ಗಾಂಜಾ ಮಾರಾಟ ಮಾಡಿದ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಬೈಂದೂರಿನಲ್ಲಿ 5, ಗಂಗೊಳ್ಳಿಯಲ್ಲಿ 4, ಕುಂದಾಪುರದಲ್ಲಿ 2, ಪಡುಬಿದ್ರಿಯಲ್ಲಿ 5 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಹಲವು ಮಂದಿ ಯನ್ನು ಬಂಧಿಸಬೇಕಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.