ಬಿಸಿಲ ಪ್ರಕರತೆ! ಆನಾರೋಗ್ಯಕ್ಕೆ ಒಳಗಾಗುತ್ತಿರುವ ಮಕ್ಕಳು

IMG-20240511-WA0010
Published on

ವಿಜಯವಾಣಿ ವಿಶೇಷ, ಗದಗ
ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ 40 ರಿಂದ 42 ಡಿಗ್ರಿ ಸೆಲ್ಸಿ ಉಷ್ಣಾಂಶ ದಾಖಲಾಗುತ್ತಿದ್ದು, ಹಸುಗೂಸು, ಚಿಕ್ಕಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಚಿಕ್ಕಮಕ್ಕಳ ಪ್ರಕರಣಗಳು ಶೇ. 30ರಷ್ಟು ಅಧಿಕವಾಗಿದ್ದು ಜಿಲ್ಲಾಸ್ಪತ್ರೆ ಮೂಲಗಳು ತಿಳಿಸಿವೆ. ಬಿಸಿಲ ಪ್ರಕರತೆಗೆ ಮಕ್ಕಳಲ್ಲಿ ಜ್ವರ, ತಲೆ ಸುತ್ತವುದು ಮತ್ತು ನಿಶಕ್ತಿಗೊಳ್ಳು ಪ್ರಕರಣಗಳೇ ಹೆಚ್ಚಾಗುತ್ತಿವೆ.
ಹವಾಮಾನ ಇಲಾಖೆಯ ಪ್ರಕಾರ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ 41 ರ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದೆ. ಇನ್ನೂ ನಾಲ್ಕೆದು ದಿನಗಳ ಕಾಲ ಇದೇ ರೀತಿ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಜಿಲ್ಲೆಯಾದ್ಯಂತ ಬಿಸಿಲಿನ ತಾಪ ದಿನೆ ದಿನೇ ಹೆಚ್ಚುತ್ತಿರುವುದರಿಂದ ಮಕ್ಕಳಷ್ಟೇ ಅಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಬಿಸಿಲಿನ ತೀವ್ರತೆಯಿಂದ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ 8 ಗಂಟೆ ಯಿಂಲದೇ ಆರಂಭವಾಗುವ ಬಿಸಿಲಿನ ಪ್ರಕರತೆ ಮಧ್ಯಾಹ್ನ 4 ಗಂಟೆ ವರೆಗೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಸಂಜೆ ಮತ್ತು ರಾತ್ರಿ ವೇಳೆ ಉಷ್ಣಾಂಶಕ್ಕೆ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ನಿದ್ರಾಹಿನತೆ ಕಂಡು ಬರುತ್ತಿದೆ.

ಮಾರುಕಟ್ಟೆ ಸ್ತಬ್ಧ:
ಬಿಸಿಲಿನ ಪ್ರಕರತೆ ಪರಿಣಾಮ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಾಣುತ್ತಿಲ್ಲ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಸ್ಟೇಷನ್​ ರಸ್ತೆ, ಬ್ಯಾಂಕ್​ ರಸ್ತೆಗಳಲ್ಲಿ ಮಧ್ಯಾಹ್ನದ ವೇಳೆಗೆ ಜನಸಂದಣಿ ಕರಗುತ್ತಿದೆ. ಮಾರುಕಟ್ಟೆಯಲ್ಲಿ ವ್ಯಾಪಾರವು ನಡೆಯುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಉಷ್ಣಾಂಶ ಎಷ್ಟು?
ಪ್ರತಿವರ್ಷ ಸಾಮಾನ್ಯವಾಗಿ ಜಿಲ್ಲೆಯಲ್ಲಿ 36 ರಿಂದ 38 ಡಿಗ್ರಿ ಸೆಲ್ಸಿಯಸ್​ ವಾಡಿಕೆ ಉಷ್ಣಾಂಶ ದಾಖಲಾಗುತ್ತದೆ. ಆದರೆ, ಈ ಬಾರಿ ಏಪ್ರಿಲ್​ ತಿಂಗಳ ಆರಂಭದಲ್ಲೇ ಬಿಸಿಲಿನ ಪ್ರಕರತೆಯಲ್ಲಿ ಏರಿಕೆ ಕಂಡಿದೆ. ಸಾರ್ವಜನಿಕರು ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಮನೆಯಿಂದ ಹೊರ ಬರುವ ಸ್ಥಿತಿ ಎದುರಾಗಿದೆ. ನಗರದ ಭೂಮರೆಡ್ಡಿ ವೃತ್ತ, ಗಾಂಧಿ ವೃತ್ತ ಸೇರಿದಂತೆ ಅಲ್ಲಲ್ಲಿ ಸ್ಥಾಪಿಸಲಾಗಿರುವ ಅರವಟಿಗೆಗಳ ಮುಂದೆ ಜನ ಕುಡಿಯುವ ನೀರಿಗಾಗಿ ಮುಗಿ ಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ. ಉಷ್ಣಾಂಶ ಏರಿಕೆಯಿಂದ ಮಧ್ಯಾಹ್ನದ ವೇಳೆಗೆ ಜಿಲ್ಲೆಯು ಕಾದ ಕಾವಲಿಯಂತೆ ಬದಲಾಗುತ್ತಿದೆ. ರಾತ್ರಿ ವೇಳೆ, ವಿಪರೀತ ಸೆಕೆಯಿಂದಾಗಿ ಜನರು ಮನೆಯ ತಾರಸಿ ಮೇಲೆ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗುತ್ತಿದ್ದಾರೆ.

ಮರಗಳೇ ಆಸರೆ:
ಗ್ರಾಮೀಣ ಭಾಗದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಗ್ರಾಮೀಣ ಭಾಗದ ಜನರು ಗ್ರಾಮಗಳಲ್ಲಿರುವ ದೊಡ್ಡ ಮರಗಳ ಆಸರೆ ಪಡೆಯುತ್ತಿದ್ದಾರೆ. ಗುಂಪು ಗುಂಪಾಗಿ ಕುಳಿಯು ಸಮಯ ಕಳೆಯುತ್ತಾರೆ. ರಾತ್ರಿ ಊರಿನ ಶಾಲೆ ಆವರಣ, ದೊಡ್ಡ ಮನೆಯ ಮೇಲೆ ಮಲಗುವ ಮೂಲಕ ಜಳದಿಂದ ರಕ್ಷಣೆ ಪಡೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net