ಸಾವು ಜಯಿಸದ ಬಿಷ್ಟಪ್ಪ ಗುಡಿಮನಿ

Bistappa gudimani
Published on

ಬಂಕಾಪುರ: ಮರಣ ಹೊಂದಿದ್ದಾನೆ ಎಂದು ಆಸ್ಪತ್ರೆಯಿಂದ ಅಂತ್ಯಕ್ರಿಯೆಗೆ ತರುತ್ತಿದ್ದಾಗ ಉಸಿರಾಡಿ ಜೀವಂತವಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾನೆ.

ಪಟ್ಟಣದ ಮಂಜುನಾಥ ನಗರದ ನಿವಾಸಿ ವ್ಯಾಪಾರಸ್ಥ ಬಿಷ್ಟಪ್ಪ ಅಶೋಕ ಗುಡಿಮನಿ (47) ಮೃತಪಟ್ಟವ.

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಿಷ್ಟಪ್ಪನನ್ನು ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಫೆ. 9ರಂದು ಬಿಷ್ಟಪ್ಪ ಸತ್ತಿದ್ದಾಗಿ ಪತ್ನಿ ಶೀಲಾ, ಸಹೋದರ ಮಾಲತೇಶ ಪಟ್ಟಣದಲ್ಲಿನ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಶವ ಸಂಸ್ಕಾರಕ್ಕೆ ತಯಾರಿ ಮಾಡಿಕೊಳ್ಳುವಂತೆ ಹೇಳಿದ್ದರು. ಹೀಗಾಗಿ, ಆತನ ಕುಟುಂಬಸ್ಥರು, ಸಂಬಂಧಿಕರು ಮನೆ ಬಳಿ ಜಮಾಯಿಸಿದ್ದರು. ಆತನ ಗೆಳೆಯರು ಮೃತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬ್ಯಾನರ್​ಗಳನ್ನು ಪಟ್ಟಣದ ತುಂಬೆಲ್ಲ ಹಾಕಿದ್ದರು.

ಧಾರವಾಡದಿಂದ ವಾಹನದಲ್ಲಿ ಬರುವಾಗ ಬಂಕಾಪುರ ಸಮೀಪಿಸುತ್ತಿದ್ದಂತೆ ಮೃತಪಟ್ಟಿದ್ದಾನೆ ಎನ್ನಲಾದ ಬಿಷ್ಟಪ್ಪ ಜೋರಾಗಿ ಉಸಿರು ತೆಗೆದುಕೊಂಡಿದ್ದ. ಇದರಿಂದ ಆಶ್ಚರ್ಯಚಕಿತರಾದ ಕುಟುಂಬಸ್ಥರು, ತಕ್ಷಣ ಶಿಗ್ಗಾಂವಿಯ ಸರ್ಕಾರಿ ಆಸ್ಪತ್ರೆಗೆ ಹೋಗಿ ಬಿಷ್ಟಪ್ಪನನ್ನು ವೈದ್ಯರಿಂದ ಪರೀಕ್ಷಿಸಿದ್ದರು. ಆಗ ಆತ ಜೀವಂತವಾಗಿರುವ ಕುರಿತು ವೈದ್ಯರು ತಿಳಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್​ಐಗೆ ದಾಖಲಿಸಲಾಗಿತ್ತು. ಪತಿ ಆಕಾಲಿಕ ಮರಣದ ಸುದ್ದಿ ತಿಳಿದು ದಿಗ್ಭŠಮೆಗೊಂಡಿದ್ದ ಪತ್ನಿ, ತಾಯಿ, ಮತ್ತು ಮಕ್ಕಳು, ಕುಟುಂಬಸ್ಥರು, ಬಿಷ್ಟಪ್ಪ ಜೀವಂತವಾಗಿರುವ ಸುದ್ದಿ ಕೇಳಿ ನಿಟ್ಟುಸಿರುಬಿಟ್ಟಿದ್ದರು.

ಫೆ. 9ರಿಂದ ಹುಬ್ಬಳ್ಳಿಯ ಕೆಎಂಸಿಆರ್​ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಷ್ಟಪ್ಪ ಕೊನೆಗೂ ಮೃತ್ಯು ಜಯಿಸದೇ ಇಹಲೋಕ ತ್ಯಜಿಸಿದರು. ಬಿಷ್ಟಪ್ಪ ಗುಡಿಮನಿಯ ಕುಟುಂಬ ಸದಸ್ಯರು ಪಟ್ಟಣದ ಸ್ಮಶಾನದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net