ಕ್ರಿಶ್ಚಿಯನ್ನರಿಂದ ಬಿಷಪ್ ಹೌಸ್‌ಗೆ ಮುತ್ತಿಗೆ, ಕೊಲ್ಲುವ ಸಂಚು ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

attack on Bishop
Published on

ಮೈಸೂರು: ಮೈಸೂರು ಬಿಷಪ್ ಆಗಿದ್ದ ರೆವರೆಂಡ್ ಫಾದರ್ ಕೆ.ಎಂ.ವಿಲಿಯಂ ಅವರನ್ನು ಕೊಲ್ಲುವ ಸಂಚು ನಡೆದಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕ್ರಿಶ್ಚಿಯನ್ ಸಮುದಾಯದವರು ಬಿಷಪ್ ಹೌಸ್‌ಗೆ ಮಂಗಳವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬನ್ನಿಮಂಟಪದ ನೆಲ್ಸನ್ ಮಂಡೇಲಾ ರಸ್ತೆಯಲ್ಲಿರುವ ಬಿಷಪ್ ಹೌಸ್‌ಗೆ ಮುತ್ತಿಗೆ ಹಾಕಿದ ಜನರು, ಮೈಸೂರು ಪ್ರಾಂತ್ಯದ ಅಪೋಸ್ಟೋಲಿಕ್ ಆಡಳಿತಾಧಿಕಾರಿಯಾಗಿರುವ ಆರ್ಚ್ ಬಿಷಪ್ ಎಮೆರಿಟಸ್ ಬರ್ನಾಡ್ ಬ್ಲಾಸಿಯಸ್ ಮೊರಾಸ್ ಅವರನ್ನು ಕೆಲಕಾಲ ಸಭಾಂಗಣದ ಒಳಗೆ ದಿಗ್ಬಂಧನ ವಿಧಿಸಿದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನಡೆಸುತ್ತಿದ್ದ ಫಾದರ್ ಕೆ.ಎಂ. ವಿಲಿಯಂ ಅವರನ್ನು ಷಡ್ಯಂತ್ರದಿಂದ ಹೊರ ಹೋಗುವಂತೆ ಮಾಡಲಾಗಿದೆ. ಈಗ ಅವರನ್ನು ಸುಪಾರಿ ಕೊಟ್ಟು ಕೊಲ್ಲುವಂತೆ ಇಲ್ಲಿನ ಕೆಲ ಧರ್ಮಗುರುಗಳೇ ಮಾತನಾಡಿರುವ ಆಡಿಯೋ ಮತ್ತು ವಿಡಿಯೋ ಬಹಿರಂಗಗೊಂಡಿದೆ. ಆಡಿಯೋದಲ್ಲಿ ಬಿಷಪ್ ವಿಲಿಯಂ ಅವರನ್ನು ಹತ್ಯೆ ಮಾಡಲು ಸಂಚು ಮಾಡಿದ್ದಾರೆ ಎನ್ನಲಾದ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಲಿಯಂ ಅವರನ್ನು ಬಿಷಪ್ ಜವಾಬ್ದಾರಿಯಿಂದ ತೆಗೆದದ್ದು ಆಯಿತು. ಈಗ ಅವರ ಕೊಲೆಗೂ ಮುಂದಾಗಿರುವುದು ದುರದೃಷ್ಟಕರ ಎಂದು ಕಿಡಿಕಾರಿದರು.
ಆಡಿಯೋದಲ್ಲಿ ಗನ್ ಕೊಡು ಅವರನ್ನು ಕೊಂದು ಹಾಕುತ್ತೇನೆ ಎನ್ನುವ ಮಾತುಗಳು ಕೇಳಿಬಂದಿವೆ. ಬಳಿಕ ಸುಪಾರಿ ಕೊಟ್ಟು ಬಿಡೋಣ ಮುಗಿಸಲು ಎನ್ನುವ ಮಾತು ಕೇಳಿಬಂದಿದೆ. ಇದು ಕೊಡಗಿನ ನಾಪೋಕ್ಲು ಫಾದರ್ ಜ್ಞಾನ ಪ್ರಕಾಶ್, ಮಂಡ್ಯ ನಗರದ ಚರ್ಚ್ ಫಾದರ್ ಪ್ರವೀಣ್ ಕುಮಾರ್, ಮದ್ದೂರು ನಗರದ ಚರ್ಚ್ ಫಾದರ್ ಅಂತೋಣಿಬರಾಜ್, ಹುಣಸೂರು ಕೂಡಲೂರು ಚರ್ಚ್ ಫಾದರ್ ರೋಹನ್ ಅವರ ಫೋನ್ ಸಂಭಾಷಣೆ ಆಗಿದೆ ಎನ್ನಲಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಏನೂ ತಪ್ಪು ಮಾಡದ ಬಿಷಪ್ ಕೆ.ಎ.ವಿಲಿಯಂ ಅವರನ್ನು ರಜೆಯಲ್ಲಿ ಹೋಗುವಂತೆ ಕಳುಹಿಸಿದ್ದು, ಅವರು ಎಲ್ಲಿ ಇದ್ದಾರೆ ಎನ್ನುವುದೇ ಗೊತ್ತಿಲ್ಲ. ಒಂದು ವರ್ಷದಿಂದ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಅವರು ಏನಾಗಿದ್ದಾರೆ ಎನ್ನುವುದು ನಮಗೆಲ್ಲ ಆತಂಕವಾಗಿದೆ. ಆದ್ದರಿಂದ ಅವರು ಜೀವಂತವಾಗಿರುವ ಕುರಿತು ಖಚಿತಪಡಿಸಬೇಕು. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಅಲ್ಲದೇ ಕೊಲೆ ಮಾಡುವುದಾಗಿ ಹೇಳಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಷಪ್ ಅವಧಿಯಲ್ಲಿ ವಿಲಿಯಂ ಅವರು ಹಣಕಾಸು ವಿಚಾರದಲ್ಲಿ ಬಜೆಟ್ ಸೇರಿದಂತೆ ಕೆಲ ಬದಲಾವಣೆ ತಂದರು. ಇದರಿಂದಾಗಿ ಮೈಸೂರು ಪ್ರಾಂತ್ಯಕ್ಕೆ ಸೇರಿದ ಕೆಲ ಫಾದರ್‌ಗಳು ವಿಲಿಯಂ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮೈಸೂರು ಧರ್ಮಪ್ರಾಂತ್ಯದ 37 ಮಂದಿ ಪಾದ್ರಿಗಳು ವ್ಯಾಟಿಕನ್ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಫ್ಯಾಬ್ರಿಕೇಟೆಡ್ ಆ್ಯಂಡ್ ಫೇಕ್ ನಂಬರ್‌ಗಳನ್ನು ಅಳವಡಿಸಿದ್ದಾರೆ. ಈ ಷಡ್ಯಂತ್ರ ಮಾಡಿರುವ ಫಾದರ್‌ಗಳ ಮೇಲೆ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಇದರಿಂದಾಗಿ ವಿಲಿಯಂ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎನ್ನುವುದು ಸಾಬೀತಾಗಿದೆ ಎಂದರು.
ಸುಳ್ಳು ಆರೋಪಗಳನ್ನು ವಿಚಾರಣೆ ಮಾಡಲು 2021ರಲ್ಲಿ ವ್ಯಾಟಿಕನ್ ಬಿಷಪ್‌ಗಳ ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು. ಆರ್ಚ್ ಬಿಷಪ್ ಲಿಯೋ ಕರ್ನೆಲಿಯೋ ನೇತೃತ್ವದ ಸಮಿತಿ ಎರಡೆರಡು ಬಾರಿ ಮೈಸೂರು ಧರ್ಮಕ್ಷೇತ್ರಕ್ಕೆ ಆಗಮಿಸಿ, ಪರಿಶೀಲಿಸಿ, ವ್ಯಾಟಿಕನ್ ಬಿಷಪ್‌ಗಳಿಗೆ ಗೌಪ್ಯ ವರದಿ ನೀಡಬೇಕಿತ್ತು. ಆದರೆ, ಈ ವರದಿಯ ಅಂಶಗಳನ್ನು ಬಹಿರಂಗಗೊಳಿಸಿ ವಿಚಾರಣಾ ನೀತಿಗಳನ್ನು ಗಾಳಿ ತೋರಿದ್ದಾರೆ. ಹಾಗಾಗಿ ಮುಂದಿನ ಪೀಳಿಗೆಗೆ ಕ್ರೈಸ್ತ ಧರ್ಮದ ಪಾವಿತ್ರೃ ಉಳಿಸಲು ಹೋರಾಟ ಅನಿವಾರ್ಯ ಎಂದು ಹೇಳಿದರು.
ಮೈಸೂರಿನ ಕ್ಯಾಥೋಲಿಕ್ ಅಸೋಸಿಯೇಷನ್‌ನ ಜಾನ್ ಬೋಸ್ಕೋ, ಪ್ರೇಮಾನಂದ್ ಡಿಮೆಲೋ, ವಕೀಲ ಜೆರಾಲ್ಡ್ ಇತರರು ಇದ್ದರು.

ಬಿಷಪ್ ಹೌಸ್ ಮುಂದೆ ಹೋರಾಟ
ಬಿಷಪ್ ಆಗಿದ್ದ ಕೆ.ಎ.ವಿಲಿಯಂ ಅವರ ಇರುವಿಕೆ ಕುರಿತು ತಿಳಿಸಬೇಕು. ಅವರ ವಿರುದ್ಧ ಷಡ್ಯಂತ್ರ ನಡೆಸಿರುವ ಫಾದರ್‌ಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಆಡಳಿತಾಧಿಕಾರಿ ಅಗಿರುವ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಸ್ಪಷ್ಟ ನಿರ್ಧಾರಕ್ಕೆ ಬರಬೇಕು. ಇಲ್ಲವಾದರೆ ಗುರುವಾರದಿಂದ ಬಿಷಪ್ ಹೌಸ್ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು.
ಮ್ಯಾಥ್ಯೂ ಬಿ.ಸುರೇಶ್, ಅಧ್ಯಕ್ಷ, ಮೈಸೂರು ಕ್ಯಾಥೋಲಿಕ್ ಅಸೋಸಿಯೇಷನ್

ನನ್ನ ಅಭ್ಯಂತರವೇನೂ ಇಲ್ಲ

ಕೆ.ಎ.ವಿಲಿಯಂ ಅವರು ಹೋಗುವುದಕ್ಕೆ ನಾನು ಕಾರಣವಲ್ಲ. ಬರುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಮೇಲಿನ ಅಧಿಕಾರಿಗಳು ಹೇಳಿದಂತೆ ನಾನು ಕೇಳಿದ್ದೇನೆ. ಈಗ ಫಾದರ್‌ಗಳ ಕುರಿತು ಬಂದಿರುವ ದೂರಿನ ಕುರಿತು ಮೇಲಿನ ಅಧಿಕಾರಿಗಳಿಗೆ ತಿಳಿಸುತ್ತೇನೆ.
ಆರ್ಚ್ ಬಿಷಪ್ ಎಮೆರಿಟಸ್ ಬರ್ನಾಡ್ ಮೊರಾಸ್
ಅಪೋಸ್ಟೋಲಿಕ್ ಆಡಳಿತಾಧಿಕಾರಿ, ಮೈಸೂರು ಪ್ರಾಂತ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net