

ಹುಬ್ಬಳ್ಳಿ: ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿ ಶಾಖೆ ಕಚೇರಿಯ ವತಿಯಿಂದ ಬುಧವಾರ ಪಾಲುದಾರರ ಸಮಾವೇಶ ಏರ್ಪಡಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸರ್ಕಾರಿ ಇಲಾಖೆಗಳು, ಕೈಗಾರಿಕೆ, ಶೈಕ್ಷಣಿಕ ಮತ್ತು ಎನ್ ಜಿಒಗಳು ಸೇರಿದಂತೆ ವಿವಿಧ ವಲಯಗಳ 170ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಪಾಲುದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ಈ ಪ್ರದೇಶದಲ್ಲಿ ಗುಣಮಟ್ಟ ಮತ್ತು ಪ್ರಮಾಣೀಕರಣದ ಸಂಸ್ಕೃತಿಯನ್ನು ಉತ್ತೇಜಿಸಲು ಬಿಐಎಸ್ ನ ಪ್ರಯತ್ನಗಳಲ್ಲಿ ಈ ಸಮಾವೇಶವು ಮಹತ್ವದ ಹೆಜ್ಜೆಯಾಗಿದೆ.
ಬಿಐಎಸ್ ಹುಬ್ಬಳ್ಳಿ ಶಾಖೆ ವಿಜ್ಞಾನಿ- ಮತ್ತು ಮುಖ್ಯಸ್ಥ ಪಿ.ಎನ್. ಮುರಳಿ ಸ್ವಾಗತಿಸಿ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವಲ್ಲಿ ಇತರರ ಪಾಲುದಾರಿಕೆಯು ಬಹಳ ಮಹತ್ವದ್ದಾಗಿದೆ. ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಗುರಿಗಳನ್ನು ತಲುಪಲು ಮಾನಕ ಸಂಸ್ಥೆಗಳು, ಕೈಗಾರಿಕೆ, ಶೈಕ್ಷಣಿಕ ಮತ್ತು ನಾಗರಿಕ ಸಮಾಜದ ನಡುವಿನ ಸಹಯೋಗವು ಕೂಡ ಅಗತ್ಯವಾಗಿದೆ ಎಂದರು.
ವಿಜ್ಞಾನಿ ಹಾಗೂ ಸಹಾಯಕ ನಿರ್ದೇಶಕ ಅಜಯ್ ಚಕ್ರವರ್ತಿ ಮಾತನಾಡಿ, ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐಎಸ್ಒ), ಅಂತಾರಾಷ್ಟ್ರೀಯ ಇಲೆಕ್ಟ್ರೋಟೆಕ್ನಿಕಲ್ ಆಯೋಗ (ಐಇಸಿ) ಮತ್ತು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ಇವುಗಳ ಮಧ್ಯೆ "ಉತ್ತಮ ಪ್ರಪಂಚಕ್ಕಾಗಿ ದೃಷ್ಟಿಕೋನ ಹಂಚಿಕೆ' ಇದರ ಅಗತ್ಯವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಉತ್ಪಾದನಾ ಕ್ಷೇತ್ರದಲ್ಲಿ ಮಾನದಂಡಗಳ ಮಹತ್ವ ಬಹಳಷ್ಟಿದೆ. ಗುಣಮಟ್ಟದ ಮಾನದಂಡಗಳನ್ನು ಪಾಲಿಸುವುದರಿಂದ ಗ್ರಾಹಕರ ನಂಬಿಕೆ ಮತ್ತು ಕೈಗಾರಿಕಾ ಬೆಳವಣಿಗೆ ಹೆಚ್ಚಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಇಂತಹ ವಿಶಿಷ್ಟ ಮತ್ತು ಪ್ರಭಾವಶಾಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಬಿಐಎಸ್ ಶಾಖೆಯನ್ನು ಅಭಿನಂದಿಸಿದರು.
ಯಾವುದೇ ವಸ್ತು ಖರೀದಿಸುವ ಮೊದಲು ಉತ್ಪನ್ನದ ಗುಣಮಟ್ಟ ಖಚಿತಪಡಿಸಿಕೊಳ್ಳುವಂತೆ ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಹಾಲ್ ಮಾರ್ಕ್ ಆಭರಣಗಳನ್ನು ನಿದಿರ್ಷ್ಟವಾಗಿ ಗಮನಿಸಬೇಕು ಎಂದು ಸಲಹೆ ನೀಡಿದರು.
ಬಿಐಎಸ್ ವಿಜ್ಞಾನಿ- ಹಾಗೂ ಜಂಟಿ ನಿರ್ದೇಶಕ ತುಷಾರ್ ಶರ್ಮಾ, ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕ ನಕುಲ್ ಶೆಟ್ಟಿ ಕೆ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ (ಗುಣಮಟ್ಟ ನಿಯಂತ್ರಣ) ಯೋಗೀಶ ಅವರು ವಿವಿಧ ತಾಂತ್ರಿಕ ಗೋಷ್ಠಿಗಳ ಮೂಲಕ ಮಾಹಿತಿ ಹಂಚಿಕೊಂಡರು.
ಬಿಐಎಸ್ ವಿಜ್ಞಾನಿ ಹಾಗೂ ಸಹಾಯಕ ನಿರ್ದೇಶಕ ಅಶುತೋಷ್ ಅಗರವಾಲ್ ವಂದಿಸಿದರು.