

ಹುಬ್ಬಳ್ಳಿ: ಗ್ರಾಹಕರ ಹಿತಾಸಕ್ತಿ ರಕ್ಷಣೆ ಹಾಗೂ ಮಾರುಕಟ್ಟೆಯಲ್ಲಿ ಗುಣಮಟ್ಟದ ಮತ್ತು ಪ್ರಮಾಣಿತ ವಸ್ತುಗಳ ಮಾರಾಟವನ್ನು ಖಚಿತ ಪಡಿಸುವ ನಿಟ್ಟಿನಲ್ಲಿ ಭಾರತೀಯ ಮಾನಕ ಬ್ಯುರೋ (ಬಿಐಎಸ್) ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಹುಬ್ಬಳ್ಳಿಯ ಬಿಐಎಸ್ ಶಾಖೆ ಉಪನಿರ್ದೇಶಕ ಎಂ. ಪ್ರದಿಪ ಕುಮಾರ್ ಮತ್ತು ಸಹಾಯಕ ನಿರ್ದೇಶಕ ಅಶುತೋಷ್ ಅಗರವಾಲ್ ನೇತೃತ್ವದ ತಂಡವು ಬುಧವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗ್ಯಾಲಕ್ಸಿ ಪ್ಲೈವುಡ್ ಆ್ಯಂಡ್ ಹಾರ್ಡವೇರ್ ಸಂಸ್ಥೆಯ ಮೇಲೆ ದಾಳಿ ನಡೆಸಿತು.
ಈ ವೇಳೆ ಪ್ಲೈವುಡ್ ಶೀಟುಗಳ ಮೇಲೆ ಐಎಸ್ಐ ಗುರುತಿನ ಅನಧಿಕೃತ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಬಿಐಎಸ್ ಮಾನ್ಯತಾ ಪ್ರಮಾಣ ಪತ್ರವಿಲ್ಲದೆ ಪರವಾನಗಿ ಸಂಖ್ಯೆಯನ್ನು ಅಕ್ರಮವಾಗಿ ಬಳಸಿಕೊಂಡು ಐಎಸ್ಐ ಗುರುತಿನ ಟ್ಯಾಗ್ ಹೊಂದಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಐಎಸ್ಐ ಗುರುತು ಮತ್ತು ಪರವಾನಗಿ ಸಂಖ್ಯೆಯೊಂದಿಗೆ ಮಾರಾಟವಾಗುತ್ತಿದ್ದ ಪ್ಲೈವುಡ್ ಗಳು ವಶಪಡಿಸಿಕೊಳ್ಳಲಾಯಿತು. ಐಎಸ್ಐ ಗುರುತಿನ ದುರುಪಯೋಗವು ಭಾರತೀಯ ಮಾನದಂಡಗಳ ಕಾಯಿದೆ 2016ರ ಶಿಕ್ಷಾರ್ಹ ಅಪರಾಧವಾಗಿದೆ.
ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಬಿಐಎಸ್ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ "ಬಿಐಎಸ್ ಕೇರ್' ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ವೇದಿಕೆಗಳಲ್ಲಿ ಲಭ್ಯವಿದೆ. ಈ ಆ್ಯಪ್ ಮೂಲಕ ಬಳಕೆದಾರರು ಕೆಳಗಿನ ಸೇವೆಗಳನ್ನು ಪಡೆಯಬಹುದಾಗಿದೆ.
ಐಎಸ್ಐ ಗುರುತಿರುವ ಉತ್ಪನ್ನಗಳ ಪ್ರಾಮಾಣಿಕತೆಯನ್ನು ಪರಿಶೀಲಿಸಬಹುದು.
ಬಿಐಎಸ್ ಪರವಾನಗಿ ಮತ್ತು ಹಾಲ್ ಮಾರ್ಕಿಂಗ್ ನೋಂದಣಿ ಸಂಖ್ಯೆಗಳ ಮಾನ್ಯತೆ ಪರಿಶೀಲಿಸಬಹುದು.
ಐಎಸ್ಐ ಗುರುತು ದುರ್ಬಳಕೆ ಅಥವಾ ಗುಣಮಟ್ಟ ಸಮಸ್ಯೆಗಳ ಕುರಿತು ದೂರು ಸಲ್ಲಿಸಬಹುದು.
ಭಾರತೀಯ ಮಾನದಂಡಗಳು ಮತ್ತು ಬಿಐಎಸ್ ಉಪಕ್ರಮಗಳ ಬಗ್ಗೆ ಇತ್ತೀಚಿನ ಮಾಹಿತಿ ಪಡೆಯಬಹುದು.
ಉತ್ಪನ್ನದ ಗುಣಮಟ್ಟ ಮತ್ತು ಸುರಕ್ಷತೆ ಖಚಿತಪಡಿಸುವುದು ನಿಯಂತ್ರಕರು, ತಯಾರಕರು ಮತ್ತು ಸಾರ್ವಜನಿಕರ ಸಾಮೂಹಿಕ ಜವಾಬ್ದಾರಿಯಾಗಿದ್ದು, ಬಳಕೆದಾರರು ಎಚ್ಚರಿಕೆಯಿಂದ ಇರಬೇಕು.
ಯಾವುದೇ ಅನುಮಾನಾಸ್ಪದ ಐಎಸ್ಐ ಗುರುತು ದುರ್ಬಳಕೆಯ ಬಗ್ಗೆ ಕಂಡು ಬಂದಲ್ಲಿ ಬಿಐಎಸ್ ಕೇರ್ ಆ್ಯಪ್ ಅಥವಾ ಸಮೀಪದ ಬಿಐಎಸ್ ಕಚೇರಿಗೆ ಸಂಪರ್ಕಿಸಿ ದೂರು ನೀಡುವಂತೆ ಅಧಿಕಾರಿಗಳು ವಿನಂತಿಸಿದರು.