

ಹುಬ್ಬಳ್ಳಿ: ಭಾರತೀಯ ಮಾನಕ ಸಂಸ್ಥೆಯ (ಬಿಐಎಸ್) ಹುಬ್ಬಳ್ಳಿ ಶಾಖೆ ವತಿಯಿಂದ ದಾವಣಗೆರೆಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ದಾವಣಗೆರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಸಮ್ಮೇಳನ ಏರ್ಪಡಿಸಲಾಯಿತು.
ಕೈಗಾರಿಕೆಗಳಲ್ಲಿ ಗುಣಮಟ್ಟ, ಅನುಸರಣಾ ಮೌಲ್ಯಮಾಪನ, ಬಿಐಎಸ್ ಪ್ರಮಾಣೀಕರಣ ಯೋಜನೆ ಇವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಲಾಯಿತು.
ಬಿಐಎಸ್ ಹುಬ್ಬಳ್ಳಿ ಕಚೇರಿ ವಿಜ್ಞಾನಿ ತುಷಾರ್ ಶರ್ಮಾ ಮಾತನಾಡಿ, ಕೈಗಾರಿಕೆಗಳು ಹಾಗೂ ಬಿಐಎಸ್ ಕಚೇರಿಗಳ ಮಧ್ಯೆ ಅಂತರ ಕಡಿಮೆ ಮಾಡುವ ಉದ್ದೇಶದಿಂದ ಉದ್ಯಮ ಸಮಾವೇಶ ಏರ್ಪಡಿಸಲಾಗಿದೆ ಎಂದರು.
ದಾವಣಗೆರೆ ಡಿಐಸಿ ಉಪನಿರ್ದೇಶಕ ವೀರೇಶ ನಾಯಕ, ಬಿಐಎಸ್ ಪ್ರಮಾಣೀಕರಣ, ಗುಣಮಟ್ಟದ ವಸ್ತು ಉತ್ಪಾದನೆ, ಗ್ರಾಹಕರ ಸುರಕ್ಷತೆ ಹಾಗೂ ಸ್ಪರ್ಧಾತ್ಮಕತೆ ಬಗ್ಗೆ ಈ ಕಾರ್ಯಕ್ರಮ ಬೆಳಕು ಚೆಲ್ಲಿದೆ ಎಂದರು.
ನಂತರ ತಾಂತ್ರಿಕ ಗೋಷ್ಠಿಗಳು ನಡೆದವು. ಬಿಐಎಸ್ ಮೌಲ್ಯಮಾಪನ ಯೋಜನೆ, ಪರವಾನಗಿ ನೀಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.
ಶಾಖೆಯ ಸಹಾಯಕ ನಿರ್ದೇಶಕ ಅಶುತೋಷ ಅಗ್ರವಾಲ, ಭಾರತ ಸರ್ಕಾರವು ಕೈಗಾರಿಕೆಗಳ ಬೆಳವಣಿಗೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಾರಿ ಮಾಡಿದ ಗುಣಮಟ್ಟ ನಿಯಂತ್ರಣ ಕುರಿತ ಆದೇಶಗಳು, ಅವುಗಳ ಮಹತ್ವವನ್ನು ವಿವರಿಸಿದರು.
ಗುಣಮಟ್ಟ ಪ್ರೇರಣಾಧಿಕಾರಿ ಮಹಮ್ಮದ ಬಿಜಾಪುರ, ಬಿಐಎಸ್ ಕೇರ್ ಅಪ್ಲಿಕೇಶನ್ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಾತ್ಯಕೆ ನೀಡಿದರು.
ನಂತರ ಎಲ್ಲ ಕೈಗಾರಿಕೋದ್ಯಮಿಗಳೊಂದಿಗೆ ಮುಕ್ತ ಸಂವಾದ ನಡೆಸಲಾಯಿತು.
ಉದ್ಯಮಿಗಳು ತಮ್ಮ ಸಂಶಯಗಳನ್ನು ಪರಿಹಾರ ಮಾಡಿಕೊಂಡರು. ಅಲ್ಲದೇ ಬಿಐಎಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಉದ್ಯಮ ಕ್ಷೇತ್ರದ ಸುಮಾರು 80 ಜನರು ಪಾಲ್ಗೊಂಡಿದ್ದರು.