

ಹುಬ್ಬಳ್ಳಿ: ಭಾರತೀಯ ಮಾನಕ ಬ್ಯೂರೋ (ಬಿಐಎಸ್) 78ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಶಾಖೆಯ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳ ಸಮ್ಮೇಳನವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಗುಣಮಟ್ಟದ ಉತ್ಪಾದನೆ ಸಲುವಾಗಿ ಬಿಐಎಸ್ ಕೈಗೊಂಡಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಕೈಗಾರಿಕೆ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಹಭಾಗಿತ್ವ ಸಾಧಿಸುವುದು ಮತ್ತು ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿಐಎಸ್ ಹುಬ್ಬಳ್ಳಿ ಶಾಖೆ ನಿರ್ದೇಶಕ ಡಿ.ಪಿ. ಕುಮಾರ ಪ್ರಾಸ್ತಾವಿಕ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಹಾಗೂ ಸುರಕ್ಷತೆ, ಗುಣಮಟ್ಟದ ಉತ್ಪನ್ನ ತಯಾರಿಸವುದನ್ನು ಖಾತರಿ ಪಡಿಸುವಲ್ಲಿ ಮಾನಕ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.
2025ರ ಐಇಸಿ ಸಾಮಾನ್ಯ ಸಭೆಯ ವಿಶೇಷತೆಗಳನ್ನು ಪ್ರದರ್ಶಿಸಲಾಯಿತು. ಸಭೆಯಲ್ಲಿದ್ದ ಪ್ರತಿನಿಧಿಗಳು ಮಾಹಿತಿಯನ್ನು ವೀಕ್ಷಿಸಿದರು.
ಸಹಾಯಕ ನಿರ್ದೇಶಕ ಕಿರಣ ಕುಮಾರ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಬಗ್ಗೆ ಮಾಹಿತಿ ನೀಡಿದರು. ಎಂಎಸ್ಎಂಇಗಳು ಗುಣಮಟ್ಟ ಕಾಯ್ದುಕೊಳ್ಳುವುದು, ಪ್ರಮಾಣಪತ್ರ ಪಡೆಯಲು ಇರುವ ನಿಯಮ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿದರು.
ಬಿಐಎಸ್ ಶಾಖೆ ಉಪ ನಿರ್ದೇಶಕ ಎಂ. ಪ್ರದೀಪ ಕುಮಾರ, ಸಂಸ್ಥೆಯ ಸಾಧನೆಗಳ ಮಾಹಿತಿ ನೀಡಿದರು. ಸ್ಟ್ಯಾಂಡರ್ಡ್ಸ್ ಫಾಮುರ್ಲೇಶನ್, ಕೊಲ್ಯಾಬೊರೇಶನ್, ಅಕಾಡೆಮಿಕ್ ಇಂಟಿಗ್ರೇಶನ್,
ಜಾಗೃತಿ ಕಾರ್ಯಕ್ರಮಗಳ ಬಗ್ಗೆ ತಿಳಿವಳಿಕೆ ನೀಡಿದರು.
ನೂರಕ್ಕೂ ಹೆಚ್ಚು ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು. ವಾಣಿಜ್ಯೋದ್ಯಮಿಗಳು ಮುಕ್ತವಾಗಿ ಸಂವಾದ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಿಐಎಸ್ ಸಹಯೋಗದೊಂದಿಗೆ ಭವಿಷ್ಯದಲ್ಲಿ ಇನ್ನಷ್ಟು ಕಾರ್ಯಕ್ರಮ ಆಯೋಜನೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು.
ಭಾರತದ ಕೈಗಾರಿಕಾ ಅಭಿವೃದ್ಧಿ ಅದರಲ್ಲೂ ಗುಣಮಟ್ಟಕ್ಕೆ ಆಧ್ಯತೆ ನೀಡುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯಗಳು ಮಂಡನೆಯಾದವು.