ಕೂಟಿಯಾಲ ಸೇತುವೆ ಸಂಪರ್ಕ ರಸ್ತೆಗೆ ಭೂಮಿಪೂಜೆ

10mdkf1 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಇಪ್ಪತ್ತೈದು ವರ್ಷದಿಂದ ನನೆಗುದಿಗೆ ಬಿದ್ದಿರುವ ಕೂಟಿಯಾಲ ಸೇತುವೆ ಸಂಪರ್ಕ ರಸ್ತೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಲಾಗಿದೆ. ಅರಣ್ಯ ಜಾಗದಲ್ಲಿ ರಸ್ತೆ ಕಾಮಗಾರಿಗೆ ಇಲಾಖೆ ಒಪ್ಪಿಗೆ ನೀಡದ್ದರಿಂದ ಕಾಮಗಾರಿಗೆ ನನೆಗುದಿಗೆ ಬಿದ್ದಿತ್ತು. ಅರಣ್ಯ ಇಲಾಖೆಯಿಂದ ಸಮ್ಮತ್ತಿ ಸಿಗದ್ದಿದ್ದರೂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ.

ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದ್ದಾರೆ. ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲೇಂಗಡ ರೀನಾ, ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪೊನ್ನಂಪೇಟೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ.ಕೆ. ಮಹಾದೇವ್ ಮತ್ತಿತರರ ಸಮ್ಮುಖದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ೨.೬೦ ಕೋಟಿ ರೂಪಾಯಿ ವೆಚ್ಚದಲ್ಲಿ ೨.೮೫ ಕಿಲೋಮೀಟರ್ ರಸ್ತೆ ಕಾಮಗಾರಿ ಕೈಗೆತ್ತಿ
ಕೊಳ್ಳಲಾಗಿದೆ. ಕುಶಾಲನಗರದ ಗುತ್ತಿಗೆದಾರ ದಿನೇಶ್ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದಾರೆ. ೯-೧೧-೨೦೨೨ ರಂದು ಆನ್‌ಲೈನ್ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು)ಗೆ ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪೊನ್ನಂಪೇಟೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಲ್ಲಿಸಿದ್ದ ಪ್ರಸ್ತಾವನೆ ೨೦-೧೨-೨೦೨೨ ರಂದು ಸತಿರಸ್ಕೃತಗೊಂಡಿದೆ.

ಕೂಟಿಯಾಲ ಸೇತುವೆ ಸಂಪರ್ಕ ರಸ್ತೆಗೆ ಬಾಡಗರಕೇರಿ ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಬಿಟ್ಟುಕೊಡಬೇಕಾದ ಅರಣ್ಯ ಜಾಗಕ್ಕೆ ಪರ್ಯಾಯವಾಗಿ ಮಡಿಕೇರಿ ತಾಲೂಕು ವ್ಯಾಪ್ತಿಯ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨.೪೮ ಹೆಕ್ಟೇರ್ ಸರ್ಕಾರಿ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಪ್ರಸ್ತಾವನೆ ಸಲ್ಲಿಸ ಲಾಗಿತ್ತು. ಆದರೆ, ಸಮರ್ಪಕ ದಾಖಲಾತಿ ಸಲ್ಲಿಸಿಲ್ಲ ಎಂಬ ಕಾರಣಕ್ಕಾಗಿ ಅರ್ಜಿ ತಿರಸ್ಕರಿಸಲಾಗಿದೆ.

ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಸರ್ಕಾರಿ ಜಾಗಕ್ಕೆ ಸಂಬಂಧಿಸಿದ್ದಂತೆ ದಾಖಲಾತಿ, ನಕ್ಷೆ ಸಲ್ಲಿಸಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಲಾಗಿದೆ. ಇದರೊಂದಿಗೆ ೧೯೮೦ ರ ಅರಣ್ಯ ಕಾಯ್ದೆಯನ್ವಯ ದಾಖಲಾತಿ ಒದಗಿಸಿಲ್ಲ ಎಂದು ಅರ್ಜಿ ಅಪೂರ್ಣವಾಗಿದೆ ಎಂದು ಉಲ್ಲೇಖಿಸ ಲಾಗಿದೆ.

ಸಂಪರ್ಕ ರಸ್ತೆಗೆ ೨.೪೮ ಹೆಕ್ಟೇರ್ ಜಾಗ ಬೇಕೆಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಅರಣ್ಯ ಜಾಗ ಮತ್ತು ಅರಣ್ಯೇತರ ಜಾಗ ಎಷ್ಟೆಂದು ಉಲ್ಲೇಖಿಸಿಲ್ಲ. ರಸ್ತೆ ಪ್ರಾರಂಭವಾಗುವ ಸ್ಥಳ ಮತ್ತು ಅಂತಿಮವಾಗು ಸ್ಥಳದ ಮಾಹಿತಿ ನೀಡಿಲ್ಲ. ಜಿಪಿಎಸ್ ದಾಖಲಾತಿ ಸಲ್ಲಿಸಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿದೆ.

ನಾಣಯ್ಯ ಕೊಡುಗೆ
ಎಂ.ಸಿ. ನಾಣಯ್ಯ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ೨೫ ಲಕ್ಷ ರೂಪಾಯಿ ವೆಚ್ಚದಲ್ಲಿ ಕೂಟಿಯಾಲ ಸೇತುವೆ ನಿರ್ಮಿಸಲಾಗಿತ್ತು. ಎಸ್. ಬಂಗಾರಪ್ಪ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುಮಾ ವಸಂತ್ ಅವಧಿಯಲ್ಲಿ ಕೂಟಿಯಾಲ ಸೇತುವೆಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ಎರಡುವರೆ ದಶಕದ ಹಿಂದೆಯೇ ಕೂಟಿಯಾಲದಲ್ಲಿ ಸೇತುವೆ ನಿರ್ಮಾಣವಾಗಿದೆ. ಆದರೆ, ಬಾಡಗರಕೇರಿ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ರಸ್ತೆ ಮಾಡಲು ಅನುಮತಿ ಸಿಗದರಿಂದ ಕಾಮಗಾರಿಗೆ ತೊಡಕಾಗಿತ್ತು. ೫೦೦ ಮೀಟರ್ ಪ್ರದೇಶದಲ್ಲಿ ಮರಗಿಡ ಇದ್ದು, ಉಳಿದಂತೆ ಸಂಪರ್ಕ ರಸ್ತೆ ಇದೆ.
ಪರಿಸರವಾದಿಗಳು ಅರಣ್ಯ ಪ್ರದೇಶದೊಳಗೆ ರಸ್ತೆ ಮಾಡಲು ತೀವ್ರ ಪ್ರತಿರೋಧ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಸಂಪರ್ಕ ರಸ್ತೆ ಕಾಮಗಾರಿಗೆ ಅವಕಾಶ ನೀಡುತ್ತಿರಲಿಲ್ಲ. ಕಾನೂನು ಬದ್ಧವಾಗಿ ಅನುಮತಿ ಪಡೆಯಲು ಸಂಬಂಧಿಸಿದ ಇಲಾಖೆಯವರು ವಿಫಲವಾಗಿರುವುದು ಕೂಡ ಸುದೀರ್ಘ ಅವಧಿಗೆ ರಸ್ತೆ ಕಾಮಗಾರಿ ನನೆಗುದಿಗೆ ಬೀಳುವಂತಾಗಿದೆ.

ಹತ್ತಿರದ ದಾರಿ
ಕೂಟಿಯಾಲ ಸೇತುವೆ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿರಾಜಪೇಟೆಯತ್ತ ತೆರಳಲು ೨೦ ರಿಂದ ೩೦ ಕಿಲೋಮೀಟರ್ ದೂರ ಕಡಿಮೆಯಾಗಲಿದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಲು ಇದು ಹತ್ತಿರದ ದಾರಿಯಾಗಲಿದೆ.

**
೨.೮೫ ಕಿಲೋಮೀಟರ್ ರಸ್ತೆ ಪೈಕಿ ೧.೫ ಕಿಲೋಮೀಟರ್ ಅರಣ್ಯ ಪ್ರದೇಶವಾಗಿದೆ. ವಿವಾದ ರಹಿತವಾದ ೧.೩ ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡಲಾಗುತ್ತದೆ. ಅರಣ್ಯ ಇಲಾಖೆ ಒಪ್ಪಿಗೆ ನೀಡಿದ ಬಳಿಕ ೧.೫ ಕಿಲೋಮೀಟರ್ ಪ್ರದೇಶದಲ್ಲಿ ಕಾಮಗಾರಿ ಮಾಡಲಾಗುತ್ತದೆ. ವಿ.ಕೆ. ಮಹಾದೇವ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಪೊನ್ನಂಪೇಟೆ ಉಪವಿಭಾಗ.

**
ನಾಲ್ಕು ಎಕರೆ ಒಳಗೆ ಅರಣ್ಯ ಜಾಗ ಪಡೆದುಕೊಳ್ಳಲು ರಾಜ್ಯ ಸರ್ಕಾರದ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳಲು ಅವಕಾಶವಿದೆ. ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರ ಅನುಮತಿ ಸಿಗಲಿದೆ. ನೆಲ್ಲೀರ ಚಲನ್‌ಕುಮಾರ್, ಅಧ್ಯಕ್ಷರು, ವಿರಾಜಪೇಟೆ ಮಂಡಲ ಬಿಜೆಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net