

ಬೆಂಗಳೂರು: ಆನೇಕಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕ ರಾಜಗೋಪಾಲರೆಡ್ಡಿ ಎಂಬುವವರು ಲಾಕ್‌ಡೌನ್ ನಡುವೆಯೂ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡು ವಿವಾದಕ್ಕೆ ಒಳಗಾಗಿದ್ದಾರೆ.
ಭಾನುವಾರ ಸಂಪೂರ್ಣ ಲಾಕ್‌ಡೌನ್ ಇದ್ದು, ರಾತ್ರಿ 8 ಗಂಟೆ ನಂತರ ಸೋಮವಾರ ಬೆಳಗ್ಗೆವರೆಗೆ ಕರ್ಫ್ಯೂ ಕೂಡ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಸರ್ಕಾರ ಸಾಕಷ್ಟು ಮೊದಲೇ ಘೋಷಣೆ ಮಾಡಿದೆ. ಅದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದೂ ತಾಕೀತು ಮಾಡಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇವತ್ತು ಪೂರ್ತಿ ದಿನ ಮನೆಯಲ್ಲಿದ್ದು, ಯಾರ ಭೇಟಿಗೂ ಅವಕಾಶ ನೀಡಿಲ್ಲ.
ಇಷ್ಟಿದ್ದರೂ ಆನೇಕಲ್‌ನಲ್ಲಿ ಇವತ್ತು ಕಾಂಗ್ರೆಸ್ ನಾಯಕ ರಾಜಗೋಪಾಲರೆಡ್ಡಿ ಅವರ ಬರ್ತ್‌ಡೇಯನ್ನು ಅವರ ಅಭಿಮಾನಿಗಳು ಸಾಕಷ್ಟು ಸದ್ದುಗದ್ದಲದೊಂದಿಗೆ ಆಚರಿಸಿದರು. ಅವರ 30-40 ಅಭಿಮಾನಿಗಳು ಇದರಲ್ಲಿ ಪಾಲ್ಗೊಂಡಿದ್ದರು. ರಾಜಗೋಪಾಲರೆಡ್ಡಿ ಸೇರಿದಂತೆ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ.
ಈ ಕುರಿತು ವಿಷಯ ತಿಳಿದು ಸ್ಥಳಕ್ಕೆ ಬಂದ ಹೆಬ್ಬಗೋಡಿ ಪೊಲೀಸರು ಇವರಿಗೆಲ್ಲ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ತನಿಖೆ ನಡೆಸಿ ನಂತರ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.