

ಹುಬ್ಬಳ್ಳಿ : ವಿಶ್ವವಿಖ್ಯಾತ 61 ಅಡಿ ಭಗವಾನ್ ಪಾರ್ಶ್ವನಾಥ ಮೂರ್ತಿ ಸ್ಥಾಪನಾ ಕರ್ತೃ, ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮ ಜಯಂತಿ ಮಹಾ ಮಹೋತ್ಸವನ್ನು ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಸೆ. 18, 19 ಹಾಗೂ 20ರಂದು ಆಯೋಜಿಸಲಾಗಿದೆ.
ಸೆ. 18ರಂದು ಬೆಳಗ್ಗೆ 6 ಗಂಟೆಗೆ ಧ್ವಜಾರೋಹಣ, 7ಕ್ಕೆ ಮಹಾಮಸ್ತಕಾಭಿಷೇಕ, ಮಧ್ಯಾಹ್ನ 1 ಗಂಟೆಗೆ ನವಗ್ರಹ ವಿಧಾನ, 3ಕ್ಕೆ ಪ್ರವಚನ ಮತ್ತು ರಾಜೇಂದ್ರ ಜೈನ ತಂಡದಿಂದ ನಾಟಕ ಮತ್ತು ಜಲ ಹೋಮ, ರಾತ್ರಿ 7.30ಕ್ಕೆ ನವಗ್ರಹ ಮಹಾ ಆರತಿ, 8ಕ್ಕೆ ಹಾಸ್ಯಕವಿ ಸಮ್ಮೇಳನ ನಡೆಯಲಿದೆ.
19ರಂದು ಬೆಳಗ್ಗೆ 7 ಗಂಟೆಗೆ ಅಭಿಷೇಕ, ಮಧ್ಯಾಹ್ನ 1 ಗಂಟೆಗೆ ಮೃತ್ಯುಂಜಯ ಹೋಮ, 3ಕ್ಕೆ 1008 ಮೃತ್ಯುಂಜಯ ಮಹಾಯಾಗ, ರಾತ್ರಿ 7 ಗಂಟೆಗೆ ನವಗ್ರಹ ಮಹಾ ಆರತಿ, 8ಕ್ಕೆ ಮಹಾಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
20 ರಂದು ಬೆಳಗ್ಗೆ 7ಕ್ಕೆ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ 1008 ಕುಂಭ ಮಹಾಮೆರವಣಿಗೆ ಹಾಗೂ 1008 ಮಹಿಳೆಯರಿಂದ ಗುರುವಂದನೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಿರುವ ಸುವರ್ಣ ಮಹೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋಟ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ದೆಹಲಿಯ ಎನ್ಸಿಐಎಸ್ಎಂ ಅಧ್ಯಕ್ಷ ರಘುರಾಮ ಭಟ್ಟ ಉದ್ಘಾಟಿಸುವರು. ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಫಕಿರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಮುಕ್ತಿಮಂದಿರದ ಶ್ರೀ ವಿಮಲ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.