

ಬೆಂಗಳೂರು: 'ಲವ್ ಇನ್ ದಿ ಟೈಮ್ ಆಫ್ ಕಾಲರಾ' ಎಂಬ ಒಂದು ಪ್ರಖ್ಯಾತ ಕಾದಂಬರಿ ಇದೆ. ನಂತರ ಇದೇ ಹೆಸರಿನಲ್ಲಿ ಇದು ಸಿನಿಮಾ ಕೂಡ ಆಯಿತು. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಬರೆದ ಈ ಸ್ಪ್ಯಾನಿಷ್ ಕಾದಂಬರಿಯ ಶೀರ್ಷಿಕೆ ಸಣ್ಣ ಬದಲಾವಣೆಯೊಂದಿಗೆ ಆಗಾಗ ಪ್ರಸ್ತಾಪ ಆಗುತ್ತಲೇ ಇರುತ್ತದೆ.
ಇದೀಗ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರ ಪತ್ನಿ ತಬೂ ರಾವ್ ಕೂಡ ಅದನ್ನೇ ಸ್ವಲ್ಪ ಬದಲಿಸಿ ಹೇಳಿಕೊಂಡಿದ್ದಾರೆ. 'ಬರ್ತ್ಡೇ ಇನ್ ದಿ ಟೈಮ್ ಆಫ್ ಕೋವಿಡ್' ಎನ್ನುತ್ತಲೇ ಅವರು ಪತಿಗೆ ಜನ್ಮದಿನದ ಶುಭಾಶಯ ಕೋರಿಕೊಂಡಿದ್ದಾರೆ.
'ಇವತ್ತು ಇವರ ಜನ್ಮದಿನ. 25 ವರ್ಷಗಳಲ್ಲೇ ಇದೇ ಮೊದಲ ಸಲ ಕೋವಿಡ್ ನಮ್ಮನ್ನು ಬೇರೆ ಮಾಡಿದೆ. ಹೀಗಾಗಿ ನಾವು ಬೇರೆ ಇದ್ದರೂ ಮಾನಸಿಕವಾಗಿ ಯಾವತ್ತಿಗೂ ಒಂದೇ ಆಗಿರುತ್ತೇವೆ' ಎನ್ನುವ ಮೂಲಕ ಅವರು ಪತಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಕೆಲದಿನಗಳಿಂದ ಕ್ವಾರಂಟೈನ್ನಲ್ಲಿದ್ದಾರೆ.