ಸಾಧನೆಯ ಆತ್ಮಾವಲೋಕನವೇ ಜನ್ಮದಿನೋತ್ಸವ; ಕಾಶೀ ಜಗದ್ಗುರುಗಳ ಅಭಿಮತ

kashi
Published on

ಹೈದ್ರಾಬಾದ್ : ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳುತ್ತಾನೆ. ಜನ್ಮದಿನೋತ್ಸವವೆಂದರೆ ಪ್ರತಿ ವರ್ಷ ತಾನು ಮಾಡಿದ ಸಾಧನೆಯ ಆತ್ಮವಲೋಕನದ ದಿನ ಎಂದು ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

ಶ್ರಾವಣ ಮಾಸದ ಅನುಷ್ಠಾನದ ಅಂಗವಾಗಿ ತೆಲಂಗಾಣದ ಸದಾಶಿವಪೇಟೆಯ ಚೌಕಿಮಠದಲ್ಲಿ ಆಂಧ್ರ ಮತ್ತು ತೆಲಂಗಾಣ ಭಕ್ತರು ಹಮ್ಮಿಕೊಂಡಿದ್ದ 79ನೇ ಜನ್ಮದಿನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹುಟ್ಟಿದ ಪ್ರತಿಯೊಬ್ಬ ಮನುಷ್ಯ ತಾನು ಅನುಸರಿಸುವ ಅದ್ಯಾತ್ಮ ಮಾರ್ಗದಿಂದ ಆತ್ಮ ಸಾಧನೆ ಮತ್ತು ಇರುವ ಅವಕಾಶವನ್ನು ಬಳಕೆ ಮಾಡಿಕೊಂಡು ಸಮಾಜಿಕ ಸೇವೆಯ ಮೂಲಕ ಸಾಧನೆಯನ್ನು ಮಾಡಬೇಕು. ಪ್ರತಿವರ್ಷದ ಜನ್ಮದಿನದಂದು ತಾನು ಕಳೆದ ಒಂದು ವರ್ಷದಲ್ಲಿ ಮಾಡಿದ ಆತ್ಮ ಸಾಧನೆ ಮತ್ತು ಸಾಮಾಜಿಕ ಸಾಧನೆಯ ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗಬೇಕು. ಆಗ ಜನ್ಮದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ. ಕೇವಲ ಆಡಂಬರ, ಅರ್ಥಹೀನ ಆಚರಣೆಯಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ಮನಗಾಣಬೇಕು ಎಂದು ಜಗದ್ಗುರುಗಳು ವಿವರಿಸಿದರು.

ಜನ್ಮದಿನದ ಅಂಗವಾಗಿ ಭಕ್ತರು ಜಗದ್ಗುರುಗಳ ಭವ್ಯ ಸಾರೋಟು ಮೆರವಣಿಗೆಯನ್ನು ಮಾಡಿ ನಂತರ ತುಲಾಭಾರ ಸೇವೆಯ ಮೂಲಕ ಗುರುವಂದನೆ ಸಲ್ಲಿಸಿದರು. ಗುರುವಂದನೆಯ ಮೂಲಕ ಬಂದ ಕಾಣಿಕೆ ಹಣವನ್ನು ಆ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕಾಶೀ ಪೀಠ ಕೊಡಮಾಡುವ ಶಿಷ್ಯವೇತನ ನಿಧಿಗೆ ಸಮರ್ಪಿಸಿದರು. ಇದೇ ವೇಳೆ ಶ್ರಾವಣ ಅನುಷ್ಠಾನದ ಸವಿನೆನಪಿಗಾಗಿ ಶ್ರೀಜಗದ್ಗುರು ಪಂಚಾಚಾರ್ಯ ಮಂದಿರ ನಿರ್ಮಾಣಕ್ಕೆ ಜಗದ್ಗುರುಗಳು ಭೂಮಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಾರ್ಸಿ ಹಿರೇಮಠದ ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ, ವಿಮಲಖೇಡದ ಶ್ರೀರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಘಟಕರಾದ ಮಲ್ಲಿಕಾರ್ಜುನ ಸ್ವಾಮಿ, ವಿಶ್ವಾರಾಧ್ಯಸ್ವಾಮಿ, ವಿಶ್ವನಾಥ ಸ್ವಾಮಿ, ಸುಭಾಷ್ ಮಾಮಣೆ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net