

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ನಗರದ ಹೊಸ ಬಸ್ ನಿಲ್ದಾಣದ ವಠಾರದಿಂದ ತೆರವುಗೊಳಿಸಿ ಕಾಸರಗೋಡು ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನೆಡಲಾದ ಮಾವಿನಮರದ ಎರಡನೇ ಹುಟ್ಟುಹಬ್ಬವನ್ನು ಶಾಲಾ ಮಕ್ಕಳು ಆಚರಿಸಿದರು.
ನೆರಳು ನೀಡುವ ಮರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಡೆಸಲಾದ ’ಆಪರೇಶನ್ ಪಯಸ್ವಿನಿ’ ಅನ್ವಯ 2022ರಲ್ಲಿ ಹೆಚ್ಚಿನ ಶ್ರಮವಹಿಸಿ ಮರವನ್ನು ಅಡ್ಕತ್ತಬೈಲ್ ಶಾಲೆಗೆ ಸ್ಥಳಾಂತರಿಸಲಾಗಿತ್ತು.
ರಸ್ತೆ ಅಭಿವೃದ್ಧಿ ಸಂದರ್ಭ ನೂರಾರು ಮರಗಳನ್ನು ಕಡಿದುರುಳಿಸಲಾಗಿತ್ತು. ಇದರ ನೆನಪಿಗಾಗಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಗುತ್ತಿಗೆದಾರರಾದ ಉರಾಳುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ ವಿವಿಧೆಡೆ ಸಸಿಗಳನ್ನು ನೆಟ್ಟು ಬೆಳೆಸಿದ್ದು, ಇದರಲ್ಲಿ ಪಯಸ್ವಿನಿ ಹೆಸರಿನ ಮರವೂ ಒಳಗೊಂಡಿದೆ. ಪ್ರತಿ ವರ್ಷ ಈ ಮರಕ್ಕೆ ಶಾಲಾ ಮಕ್ಕಳು ಹೂವಿನ ಹಾರ ಹಾಕಿ ಪ್ರಕೃತಿ ಸಂರಕ್ಷಣೆ ಬಗ್ಗೆ ಪ್ರತಿಜ್ಞೆಯನ್ನೂ ಕೈಗೊಳ್ಳುತ್ತಾರೆ.
ಖ್ಯಾತ ಕವಿಯಿತ್ರಿ ಎಂ.ಸುಗತ ಕುಮಾರಿ ಅವರು ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಪಯಸ್ವಿನಿ ಹೆಸರಿನಲ್ಲಿ ಈ ಮಾವಿನ ಮರ ನೆಟ್ಟಿದ್ದರು. ಸುಗತಕುಮಾರಿ ಅವರ ನೆನಪಿಗಾಗಿ ಶ್ರೇಷ್ಠ ಕವಿಯ ಸ್ಮರಣ ದಿನವನ್ನಾಗಿ ಕಳೆದ ವರ್ಷದಿಂದ ಆಚರಿಸಲಾಗುತ್ತಿದ್ದು, ಮರದ ಬುಡದ ಸಮೀಪ ಆಗಮಿಸಿ ವಿದ್ಯಾರ್ಥಿಗಳು ಹಬ್ಬ ಆಚರಿಸುತ್ತಿದ್ದಾರೆ. ವಿದ್ಯಾರ್ಥಿಗಳೇ ಸ್ವತಃ ಈ ಮರವನ್ನು ಪೋಷಿಸುತ್ತಿದ್ದಾರೆ.