

ಆಲೂರು : ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಸಾಮಾನ್ಯ ರೈತನಾಗಿ ಬದುಕಿ, ತಳ ಸಮುದಾಯದ ಏಳಿಗೆಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಶ್ರಮಿಸಿದ್ದಾರೆ. ಪ್ರತಿಯೊಬ್ಬರು ಅವರ ತತ್ವ, ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಬೇಕು ಎಂದು ತಹಸೀಲ್ದಾರ್ ನಂದಕುಮಾರ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಲೂರು ಪಟ್ಟಣ ಮಿನಿ ವಿಧಾನಸೌಧ ಆವರಣದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು, ನುಲಿಯ ಚಂದಯ್ಯ, ನಾರಾಯಣ ಗುರು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀತ ಹಾಗೂ ಮಲ ಹೊರುವ ಪದ್ಧತಿಯ ನಿರ್ಮೂಲನೆಗೆ ಅರಸು ಶ್ರಮಿಸಿದರು. ಅವರು ನೀಡಿದ ಕೊಡುಗೆಗಳು ಮಾದರಿಯಾಗಿವೆ, ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಿ, ಹೊಲ ಉಳುವವನೇ ಒಡೆಯ ಎಂದು ನೊಂದವರ ಧ್ವನಿಯಾಗಿ, ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಕೆಳವರ್ಗದವರ ಬಾಳಿಗೆ ಬೆಳಕಾದರು ಎಂದರು.
ನಿವೃತ್ತ ಶಿಕ್ಷಕ ಹಾಗೂ ಹಿರಿಯ ಸಾಹಿತಿ ಕೆ.ಬಿ.ಗುರುಮೂರ್ತಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ಮಹತ್ವಪೂರ್ಣ ಮಾನವೀಯ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾನ್ ಮಾನತಾವಾದಿಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಮನುಜ ಕುಲಕ್ಕೆ ನೀಡಿದ ವಿಶ್ವಮಾನವ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಜಗತ್ತಿಗೆ ಅವರ ಸಂದೇಶಗಳನ್ನು ಸಾರಬೇಕಾಗಿದೆ. ಇನ್ನೂ 12ನೇ ಶತಮಾನದಲ್ಲಿ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ನುಲಿಯ ಚಂದಯ್ಯ ಅವರು ಶ್ರೇಷ್ಠ ವಚನಕಾರರಾಗಿದ್ದರು. ಅವರ ಹಲವಾರು ವಚನಗಳು ನಮಗೆ ಲಭ್ಯವಾಗಿವೆ. ಅವರ ವಚನಗಳಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪದವಿ ಕಾಲೇಜು ಉಪನ್ಯಾಸಕ ಮೋಹನ್ ಕುಮಾರ್, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಬಿ.ಸಿ.ಎಂ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಾಗಿ ಓದಿ ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತಮ ಅಂಕಗಳಿಸಿದ ಚಿನ್ನಯ್ ಹಾಗೂ ವಿನಾಯಕ ಮತ್ತು ಪದವಿಯಲ್ಲಿ ಉತ್ತಮ ಅಂಕ ಪಡೆದ ಕೆ.ಎಂ.ಪವನ್ ಎಂಬ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಆರೋಗ್ಯಾಧಿಕಾರಿ ಜ್ಯೋತಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಬಿ.ಸಿ.ಶಂಕರಚಾರ್, ತಾಲೂಕು ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಕನ್ನಡ ಸಾಹಿತ್ಯ ಪಕ್ಷ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಗುಲಾಂ ಸುತ್ತಾರ್, ದಲಿತ ಮುಖಂಡ ವೆಂಕಟಯ್ಯ, ರಾಧಮ್ಮ, ಜನಸ್ಪಂದನಾ ಸಂಸ್ಥೆಯ ಅಧ್ಯಕ್ಷ ಹೇಮಂತ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಟಿ.ಮಲ್ಲೇಶ್, ಶಿರಸ್ತೆದಾರ್ ಸೋಮಣ್ಣ, ಶ್ರೀ ಬ್ರಹ್ಮಗುರು ನಾರಾಯಣ ಸೇವಾ ಸಮಿತಿ ಅಧ್ಯಕ್ಷ ಯೋಗೇಶ್, ಚಂದ್ರಶೇಖರ್ ಆನಂದ್ ಇತರರು ಇದ್ದರು.