ಬಿಜೆಪಿ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ

Published on

ಬಳ್ಳಾರಿ : ಇಲ್ಲಿನ ಆಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜಿ.ಜನಾರ್ದನರೆಡ್ಡಿ ಮುನಿಸಿನಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಇದರ ನಡುವೆ ಕಚೇರಿಯಲ್ಲಿಯೇ ನೆರೆಯ ಮನೆಯೊಬ್ಬರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹಿರಿಯ ಮುಖಂಡರ ಅಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಕಚೇರಿಯ ಕೆಳ ಮಹಡಿಯಲ್ಲಿ ವೇದಿಕೆ ನಿರ್ಮಿಸಿ ಬರ್ತರ್ಡೆ ಆಚರಿಸಿಕೊಂಡು ಸ್ಪೀಕರ್‌ಗಳ ಸೌಂಡ್‌ಗೆ ಕುಣಿದ್ದಾರೆ. ಕೌಂಪಂಡ್‌ನಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಇತ್ತೀಚಿಗೆ ಅನಿಲ್ ಕುಮಾರ ಮೋಕಾ ಅವರು ಜಿಲ್ಲಾಧ್ಯಕ್ಷರಾಗಿ ಮರು ನೇಮಕಗೊಂಡಿದ್ದಾರೆ. ಜಿಲ್ಲಾ ಕಚೇರಿಯಲ್ಲಿ ಪಕ್ಷದ ಚಟುವಟಿಕೆ ಬಿಟ್ಟು ಬೇರೆ ಯಾವ ಕೆಲಸ ಮಾಡಬಾರದು ಎಂಬ ನಿಯಮ ಇದೆ. ಆದರೆ, ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಸ್ವತಃ ಜಿಲ್ಲಾಧ್ಯಕ್ಷ ಅನಿಲ್ ಸ್ನೇಹಿತ ಕುಟುಂಬದವರು ಎನ್ನಲಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಹೊಟೇಲ್, ಸಮುದಾಯ ಭವನ, ಮದುವೆ ಮಂಟಪ ಎಂಬಂತೆ ಬಾಡಿಗೆ ನೀಡಿದಂತೆ ಬಿಜೆಪಿ ಕಚೇರಿಯನ್ನೇ ನೀಡಲಾಗಿದೆ ಎಂದು ಪಕ್ಷದ ಕೆಲ ಮುಖಂಡರು ಜಿಲ್ಲಾಧ್ಯಕ್ಷರ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದಾರೆ. ಆದ್ದರಿಂದ, ವರಿಷ್ಠರು ಜಿಲ್ಲಾಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಮೂರು ದಿನಗಳೊಳಗೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಕೋಟ್... ಪಕ್ಷದ ಅಂತರಿಕ ವಿಚಾರಯಾಗಿರುವುದರಿಂದ ಪಕ್ಷದ ಚೌಕಟ್ಟಿನಲ್ಲೇ ಉತ್ತರಿಸುವೆ. ಈಗಾಗಲೇ ಇದರ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಈ ಕುತಂತ್ರ ಯಾರು ಮಾಡಿದ್ದಾರೆ ಎಂಬುದು ಮುಂದಿನ ದಿನಗಳಲ್ಲೇ ಸತ್ಯಾಂಶ ಹೊರಬೀಳಲಿದೆ.

- ಅನಿಲ ಕುಮಾರ ಮೋಕಾ, ಜಿಲ್ಲಾಧ್ಯಕ್ಷ, ಬಿಜೆಪಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net