

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಸಮಾಜವನ್ನು ವಿರೋಧಿಸಿ ನೋವು, ಅಪಮಾನ ಮೆಟ್ಟಿನಿಂತು ಎಲ್ಲ ವರ್ಗದ ಹೆಣ್ಣು ಮಕ್ಕಳಿಗೆ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದವರು ಸಾವಿತ್ರಿ ಬಾಯಿ ಫುಲೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಖಜಾಂಚಿ ಡಾ.ಚಿನ್ನಪ್ಪ ವೈ. ಚಿಕ್ಕಹಾಗಡೆ ತಿಳಿಸಿದರು.
ಪಟ್ಟಣದ ಬಹುಜನ ಸಮಾಜ ಪಕ್ಷದ ತಾಲೂಕು ಕೇಂದ್ರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಶಿಕ್ಷಕರು ಕಲಿಸಿಕೊಟ್ಟ ಶಿಕ್ಷಣ ಮತ್ತು ಉತ್ತಮ ಮಾರ್ಗದರ್ಶನದಲ್ಲಿ ಸಾಗಿದರೆ ಭವಿಷ್ಯ ಉತ್ತಮವಾಗಿರಲಿದೆ ಎಂದರು.
ಪತ್ರಕರ್ತ ಸಿ.ಆರ್. ವಿಜಯಕುಮಾರ್ ಮಾತನಾಡಿ, ಶೋಷಿತ ಸಮುದಾಯಗಳು ಶಿಕ್ಷಣದ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಮಾರ್ಗ ತೋರಿಸಿದ ಮಹಾನ್ ಚೇತನ ಸಾವಿತ್ರಿ ಬಾಯಿ ಫುಲೆ. ಬಾಲ್ಯ ವಿವಾಹ ವಿರೋಧಿಸಿದ್ದರು. ಅಸ್ಪೃಶ್ಯತೆ, ಜಾತೀಯತೆ, ಸತಿ ಪದ್ಧತಿ ಸೇರಿ ಸಾಮಾಜಿಕ ಪಿಡುಗುಗಳ ವಿರುದ್ಧ ದನಿ ಎತ್ತಿ ಮಹಿಳೆಯರಲ್ಲಿ ಜಾಗೃತಿಯ ಬೆಳಕನ್ನು ತುಂಬಿ, ಸಬಲೀಕರಣಕ್ಕೆ ಶ್ರಮಿಸಿದರು ಎಂದರು.
ಬಹುಜನ ಸಮಾಜ ಪಕ್ಷದ ಆನೇಕಲ್ ತಾಲೂಕು ಅಧ್ಯಕ್ಷ ಟಿ.ಎಸ್. ಕುಮಾರಾಚಾರಿ, ಪದಾಧಿಕಾರಿಗಳಾದ ಲೋಕೇಶ್, ಶಿವಕುಮಾರ್, ಕೃಷ್ಣಮೂರ್ತಿ, ಪಾಪಣ್ಣ, ಮಂಜುನಾಥ್ ಇತರರು ಹಾಜರಿದ್ದರು.