

ಚಳ್ಳಕೆರೆ: ತಮ್ಮ ಆಡಳಿತದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶ ಪಾಲನೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಿದ ಡಿ. ದೇವರಾಜ ಅರಸು ಸಮಾಜಕ್ಕೆ ಮಾದರಿಯಾಗಿ ಉಳಿದಿದ್ದಾರೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಪಾವಗಡ ರಸ್ತೆಯಲ್ಲಿನ ದೇವರಾಜ ಅರಸು ವಸತಿ ಶಾಲೆಯಲ್ಲಿ ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನದ ಅಂಶಗಳನ್ನು ಅಳವಡಿಸಿಕೊಂಡು ಬಡವರ ಮತ್ತು ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಟ್ಟಿರುವ ಧೀಮಂತ ಎನಿಸಿದ್ದಾರೆ.
ಭೂ ರಹಿತರಿಗೆ ಒಡೆತನ ಸೇರಿ ಜೀತ ಪದ್ದತಿ ನಿರ್ಮೂಲನೆ, ವೃದ್ಧರು ಮತ್ತು ವಿಧವೆಯರಿಗೆ ಸೌಲಭ್ಯಗಳನ್ನು ಜಾರಿ ಮಾಡುವ ಮೂಲಕ ಜನಮನದಲ್ಲಿ ಉಳಿದಿರುವ ಆದರ್ಶ ನಾಯಕ ಎಂದು ಬಣ್ಣಿಸಿದರು.
ಡಾ.ಬಿ.ಎಂ. ಗುರುನಾಥ್ ಉಪನ್ಯಾಸ ನೀಡಿ, ಭಾಷಾವಾರು ಪ್ರಾಂತ್ಯಗಳ ಬಳಿಕ 1973ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ.
ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣದ ಮಹತ್ವ ಕಂಡುಕೊಂಡಿದ್ದ ಅರಸು ಅವರು, ಹಿಂದುಳಿದ ವರ್ಗ, ಪ್ರತಿ ಸಮುದಾಯಗಳ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ತಹಸೀಲ್ದಾರ್ ರೇಹಾನ್ ಪಾಷಾ, ಪೊಲೀಸ್ ಉಪ ಅಧೀಕ್ಷಕ ಟಿ.ಬಿ. ರಾಜಣ್ಣ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ. ರಾಘವೇಂದ್ರ,
ಸದಸ್ಯ ಬಿ.ಟಿ. ರಮೇಶ್‌ಗೌಡ, ಬಿಇಒ ಕೆ.ಎಸ್. ಸುರೇಶ್, ತಾಪಂ ಇಒ ಟಿ.ಎಚ್. ಸಂತೋಷ್, ಪೌರಾಯುಕ್ತ ಬಿ. ಚಂದ್ರಪ್ಪ, ಪ್ರೊ.ಎಂ. ಶಿವಲಿಂಗಪ್ಪ, ಶಿವರಾಜ್, ಹರಿಪ್ರಸಾದ್, ಲಿಂಗೇಗೌಡ ಇತರರಿದ್ದರು.