

ವಿಜಯಪುರ: ಜಾನಪದ ಸುಂದರ ಬದುಕಿಗೆ ನಿರಂತರ ಸನ್ಮಾರ್ಗ ತೋರಿಸುತ್ತದೆ. ಜಾನಪದ ಸಾಹಿತ್ಯ ಹಾಗೂ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿಬೇರು. ಗ್ರಾಮೀಣರು ಸಹಕಾರ ಮತ್ತು ಭಾವೈಕ್ಯತೆಯ ಸಂದೇಶ ಸಾರುವ ಶ್ರೇಷ್ಠರು ಎಂದು ಜಿಲ್ಲಾ ಸರ್ಕಾರಿ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಾಹಿತ್ಯ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣರ ಜೀವನದಲ್ಲಿ ಅನೇಕ ಕಷ್ಟಗಳಿದ್ದರೂ ಕೂಡ ಅವುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳುವ ಆತ್ಮವಿಶ್ವಾಸ ಅವರಲ್ಲಿದೆ. ತಾಯಿಯ ಮಡಿಲಲ್ಲಿ ಸಾಹಿತ್ಯ ಹುಟ್ಟಿಕೊಳ್ಳುತ್ತದೆ ಎಂದು ಅವರು ಹೇಳಿದರು.
ಪೊಲೀಸ್ ವೃತ್ತ ನಿರೀಕ್ಷಕ ಜ್ಯೋತಿಲಿಂಗ ಹೊನಕಟ್ಟಿ ಮಾತನಾಡಿ, ಜಾನಪದ ಸಾಹಿತ್ಯದಲ್ಲಿ ಗರತಿ ಅನುಭಾವದ ವಿಷಯಗಳನ್ನು ಮೌಖಿಕವಾಗಿ ಹಾಡುತ್ತಾ ಜೀವನಕ್ಕೆ ಮೌಲ್ಯ ತುಂಬಿದ್ದಾಳೆ. ನೈತಿಕ ಹಾಗೂ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಜಾನಪದ ಸಾಹಿತ್ಯ ರಚಿತವಾಗಿರುವದರಿಂದ ಜನಮೆಚ್ಚುಗೆ ಪಡೆದುಕೊಂಡಿದೆ ಎಂದರು.
ತಾಳಿಕೋಟೆಯ ಜಾನಪದ ವಿದ್ವಾಂಸೆ ಶಿವಲೀಲಾ ಮುರಾಳ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಜಾನಪದ ಹಾಡುಗಳನ್ನು ಹಾಡಿದರು. ಶಿಕ್ಷಕ ಮಹೆತಾಬ ಕಾಗವಾಡ ತತ್ವಪದ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ ಮತ್ತಿತರರಿದ್ದರು.