ಜನನ-ಮರಣ ನೋಂದಣಿ ಕಡ್ಡಾಯ: ಅಪರ ಜಿಲ್ಲಾಧಿಕಾರಿ

udp-23-birthcertificate
Published on

ಉಡುಪಿ: ಪ್ರತಿಯೊಬ್ಬರೂ ಜನನ ಮರಣ ನೋಂದಣಿಯನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​ ಹೇಳಿದರು.

ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನನ-ಮರಣ ಪ್ರಮಾಣ ಪತ್ರ ಮಾನವನ ಪ್ರತಿಯೊಂದು ವಿಶೇಷ ಹಂತಗಳಲ್ಲಿ ಅತ್ಯವಶ್ಯವಾಗಿದೆ. ಜನನ-ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯ. 20 ದಿನಗಳ ಒಳಗಾಗಿ ಯಾವುದೇ ಶುಲ್ಕವಿಲ್ಲದೇ ನೋಂದಾಯಿಸಬಹುದಾಗಿದೆ. 21 ದಿನದ ನಂತರ 30 ದಿನದ ವರೆಗೆ 1 ರೂ. ದಂಡ, 30 ದಿನದಿಂದ 1 ವರ್ಷದ ವರೆಗೆ 5 ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮಗು ಜನನವನ್ನು ಹೆಸರಿಲ್ಲದೇ ನೋಂದಣಿ ಮಾಡಲು ಅವಕಾಶವಿದ್ದು, ಈ ರೀತಿ ನೋಂದಾಯಿಸಿದ್ದಲ್ಲಿ 12 ತಿಂಗಳ ಒಳಗಾಗಿ ಮಗುವಿನ ಹೆಸರನ್ನು ಜನನ ಪುಸ್ತಕದಲ್ಲಿ ಯಾವುದೇ ಶುಲ್ಕವಿಲ್ಲದೇ ನೋಂದಣಿ ಮಾಡಲು ಅವಕಾಶವಿದೆ. ಜನನ-ಮರಣ ನೋಂದಣಿ ದಾಖಲಾತಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗೆ ಅವಕಾಶವಿಲ್ಲ ಎಂದರು.

ವಿದೇಶಗಳಲ್ಲಿ ಜನಿಸಿದ ಮಗುವಿನ ಜನನವನ್ನು ವಿದೇಶದ ಭಾರತೀಯ ರಾಯಭಾರಿ ಕಚೇರಿಯಲ್ಲಿ ನೋಂದಾವಣಿ ಮಾಡಿಸಲು ಅವಕಾಶವಿದೆ. ಆದರೆ ಶಿಶುವಿನ ತಂದೆ ತಾಯಿಯರು ಭಾರತ ದೇಶದಲ್ಲಿ ನೆಲೆಸುವ ಉದ್ದೇಶದಿಂದ ಭಾರತಕ್ಕೆ ಹಿಂದಿರುಗಿದ್ದಲ್ಲಿ 60 ದಿನಗಳ ಒಳಗಾಗಿ ಶಿಶುವಿನ ಜನನವನ್ನು ನೋಂದಾವಣೆ ಮಾಡಿಸಬೇಕು ಎಂದರು.

ಜನನ-&ಮರಣ ಸಕ್ಷಮ ಪ್ರಾಧಿಕಾರದ ಎಲ್ಲಾ ಸ್ಥಳಿಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು, ಇ-&ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯ ಕಡ್ಡಾಯವಾಗಿ ಮಾಡುವುದರೊಂದಿಗೆ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು. ಜನನ&-ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದಾಗ ವಿಳಂಬವಿಲ್ಲದೇ ಕಾಲಮಿತಿಯೊಳಗೆ ಪ್ರಮಾಣಪತ್ರ ವಿತರಿಸಬೇಕೆಂದು ಸೂಚನೆ ನೀಡಿದರು.

ಪ್ರಸ್ತುತ ಸಾಲಿನಲ್ಲಿ 1075 ಗ್ರಾಮಾಂತರದಲ್ಲಿ, 10,233 ನಗರ ಪ್ರದೇಶದಲ್ಲಿ ಸೇರಿದಂತೆ ಒಟ್ಟು 11,308 ಜನನ ನೋಂದಣಿಯಾಗಿದೆ. 5897 ಗ್ರಾಮಾಂತರದಲ್ಲಿ 4105, ಪಟ್ಟಣ ಪ್ರದೇಶದಲ್ಲಿ ಒಟ್ಟು 10,112 ಮರಣ ಪ್ರಕರಣಗಳು ನೋಂದಣಿಯಾಗಿವೆ. ಲಿಂಗಾನುಪಾತ 958 ಇದ್ದು, ಮರಣ ಪ್ರಮಾಣ ಶೇ. 7.94 ಇದೆ ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡಾದ್​, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಮ್​.ವಿ ದೊಡ್ಡಮನಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net