

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನನ ಮತ್ತು ಮರಣ ಪ್ರಮಾಣ ಪಡೆದುಕೊಳ್ಳಲು ಜನರು ನಿತ್ಯ ಹರಸಾಹಸ ಪಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪಾಲಿಕೆ ಕಚೇರಿಗಳಿಗೆ ಅಲೆದಾಡುತ್ತಿರುವುದಲ್ಲದೆ, ಕೆಲವರು ನಿಗದಿತ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಮಧ್ಯವರ್ತಿಗಳ ಮೊರೆ ಹೋಗಿದ್ದಾರೆ.
ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗೆ 2,925 ಶಿಶುಗಳ ಜನನವಾಗಿದೆ. ಅಲ್ಲದೆ, ಕೋವಿಡ್-19 ಸೇರಿದಂತೆ ಇನ್ನಿತರ ಕಾಯಿಲೆಗಳಿಂದ 2,401 ಜನರು ಮೃತಪಟ್ಟಿದ್ದಾರೆ. ಮಾರ್ಚ್‌ನಿಂದ ಜೂನ್‌ವರೆಗೆ ಜನನ ಮತ್ತು ಮರಣ ಪ್ರಮಾಣ ಹೆಚ್ಚಾಗಿವೆ.
ಜನರ ಅಸಮಾಧಾನ: ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ಸೌಲಭ್ಯ ಇಲ್ಲದಿರುವ ಕಾರಣ ಗ್ರಾಮೀಣ ಪ್ರದೇಶ ಮತ್ತು ನಗರದ ವಿವಿಧ ಭಾಗಗಳಲ್ಲಿನ ಜನರಿಗೆ ಪ್ರಮಾಣ ಪತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಜನನ-ಮರಣ ಪ್ರಮಾಣ ಪತ್ರಕ್ಕಾಗಿ ನಿತ್ಯವೂ ಕಚೇರಿಗೆ ಹೋಗುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ನಿರ್ಲಕ್ಷೃ, ಮಾಹಿತಿ ಸಂಗ್ರಹ ಮಾಡದಿರುವ ಹಿನ್ನೆಲೆಯಲ್ಲಿ ನಮಗೆ ಪ್ರಮಾಣ ಪತ್ರಗಳು ಸಿಗುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯವರ್ತಿಗಳ ಹಾವಳಿ: ಮಹಾನಗರ ಪಾಲಿಕೆ ಸೇರಿದಂತೆ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನಿಗದಿತ ಸಮಯದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳ ಮೂಲಕ ಹೋದರೆ ಮಾತ್ರ ಒಂದು ಗಂಟೆಯ ಅವಧಿಯೊಳಗೆ ಸಿಬ್ಬಂದಿ ಪ್ರಮಾಣ ಪತ್ರ ಕೊಡುತ್ತಾರೆ. ನೇರವಾಗಿ ಹೋದರೆ ಎರಡು-ಮೂರು ದಿನ ಕಾಯಲೇಬೇಕು. ಮರಣ ಪ್ರಮಾಣ ಪತ್ರ ನಿಗದಿತ ಸಮಯದಲ್ಲಿ ಸಿಗದಿರುವ ಹಿನ್ನೆಲೆಯಲ್ಲಿ ಆಸ್ತಿ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಅರ್ಧದಲ್ಲಿಯೇ ಉಳಿದುಕೊಳ್ಳುತ್ತಿವೆ ಎಂದು ದೂರುತ್ತಾರೆ ಬೆಳಗಾವಿ ಮಾರುತಿ ಎಸ್. ಹರಿಜನ, ಇಕ್ಬಾಲ್ ಎಂ. ನದ್ಾ.
ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ಪುರಸಭೆ, ನಗರಸಭೆ ಹಾಗೂ ಸ್ಥಳೀಯ ಆಡಳಿತಕ್ಕೆ ನಿಗದಿತ ಸಮಯದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಲಾಗುವುದು. ಜನರು ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಆದರೆ, ಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ, ಪರಿಶೀಲಿಸಲಾಗುವುದು.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ