ಮೈಸೂರಿನಲ್ಲಿ ಸಿಐಟಿಯು ನಿಂದ ಸೂರ್ಯ ನಾರಾಯಣರಾವ್ (ಸೂರಿ) ಅವರ ಜನ್ಮ ಶತಾಬ್ಧಿ

Published on

ಮೈಸೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನಿಂದ ಆ.17ರಂದು ಸ್ವಾತಂತ್ರೃ ಹಾಗೂ ಕಾರ್ಮಿಕ ಪರ ಹೋರಾಟಗಾರ ಸೂರ್ಯ ನಾರಾಯಣರಾವ್ (ಸೂರಿ) ಅವರ ಜನ್ಮ ಶತಾಬ್ಧಿ, ವಿಚಾರಸಂಕಿರಣ ಆಯೋಜಿಸಲಾಗಿದೆ.
ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಕಾರ್ಮಿಕ ಸಚಿವ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿರಾವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಸಮಯದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿರುವ ಸವಾಲುಗಳು ಕುರಿತು ಹಿರಿಯ ಪತ್ರಕರ್ತ ಎಂ.ಕೃಷ್ಣಪ್ರಸಾದ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ವಿಷಯ ಮಂಡಿಸಲಿದ್ದಾರೆ. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿಭಾಗವಹಿಸಲಿದ್ದು, ಜಿಲ್ಲಾಧ್ಯಕ್ಷ ಜಿ.ಜಯರಾಂ ಅಧ್ಯಕ್ಷತೆ ವಹಿಸುವರು ಎಂದರು.
ಇದೇ ಸಂದರ್ಭ ರಾಜಪ್ಪ ದಳವಾಯಿ ರಚಿಸಿ ಕೆ.ಆರ್.ಸುಮತಿ ನಿರ್ದೇಶನದ ನ್ಯಾಯ ಕೇಳಿದ ನಿಂಗವ್ವ, ಮಾಲತೇಶ ಬಡಿಗೇರ ನಿರ್ದೇಶನದ ಕಾಮ್ರೇಡ್ ಸೂರಿ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಮಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿ ನಾಯಕರಾಗಿದ್ದ ಸೂರ್ಯನಾರಾಯಣರಾವ್ 1945-47ರಲ್ಲಿ ಉತ್ತುಂಗದಲ್ಲಿದ್ದ ಕಾರ್ಮಿಕ ಚಳವಳಿಯ ಒಡನಾಟ ಬೆಳೆಸಿಕೊಂಡು ಕಾರ್ಮಿಕ ನಾಯಕರಾಗಿ ಬೆಳೆದರು. ಜವಳಿ, ರೇಷ್ಮೆ, ಹೋಟೆಲ್, ಐಟಿಸಿ, ವಿಕ್ರಾಂತ್ ಟೈರ್ಸ್ ಸೇರಿದಂತೆ ಇನ್ನತರೆ ಕಡೆಗಳಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿದರು.1983ರಲ್ಲಿ ಶಾಸಕರಾಗಿ ರೈತರು, ಕೂಲಿಕಾರ್ಮಿಕರ ಪರ, ಅವರ ಹಕ್ಕುಗಳ ರಕ್ಷಣೆಗೆ ಧ್ವನಿ ಅಗಿದ್ದರು ಎಂದರು. ಕಾರ್ಮಿಕ ಮುಖಂಡರಾದ ಎಂ.ಅಣ್ಣಪ್ಪ, ಬಸವಯ್ಯ, ಮೆಹಬೂಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net