ಜನಾಂಗದ ಉಳಿವಿಗೆ ಬಿರ್ಸಾ ಮುಂಡಾ ಹೋರಾಟ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿಕೆ

birsa munda jayanti Mandya
Published on

ಮಂಡ್ಯ: ಬಿರ್ಸಾ ಮುಂಡಾ ಅವರು ಬುಡಕಟ್ಟು ಜನಾಂಗದವರಿಗೆ ಆರಾಧ್ಯ ದೈವದಂತೆ. ತಮ್ಮ ಜನಾಂಗದ ಅಳಿವು ಉಳಿವಿಗಾಗಿ ಹೋರಾಡಿ ಮಡಿದ ಧೀಮಂತ ನಾಯಕ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿದರು.

ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಧರ್ತಿ ಆಬಾ ಭಗವಾನ್ ಬಿರ್ಸಾಮುಂಡಾ ಅವರ 150ನೇ ಜನ್ಮ ಜಯಂತಿ ಅಂಗವಾಗಿ ಜನಜಾತಿಯ ಗೌರವ ದಿವಸ ಸಮಾರಂಭ ಹಾಗೂ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಿರ್ಸಾ ಮುಂಡಾ ಅವರನ್ನು ಭಾರತೀಯ ಇತಿಹಾಸದಲ್ಲಿ ಮಹಾನ್ ವೀರ ಎಂದು ಕರೆಯಲಾಗುತ್ತದೆ. ಬುಡಕಟ್ಟು ಸಮಾಜದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವಲ್ಲಿ ಇವರ ಪಾತ್ರ ಪ್ರಮುಖ. ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಬಿರ್ಸಾ ಮುಂಡಾ ಅವರು ಬುಡಕಟ್ಟು ಜನಾಂಗಕ್ಕೆ ನೀಡಿದ ಅವರ ಕೊಡುಗೆ, ಹೋರಾಟ ಮತ್ತು ತ್ಯಾಗವನ್ನು ಗೌರವಿಸುವುದು ಈ ಜಯಂತಿ ಉದ್ದೇಶ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು, ಅಂತಹವರ ಸಾಲಿಗೆ ಬಿರ್ಸಾ ಮುಂಡಾ ಕೂಡ ಸೇರಿದ್ದಾರೆ ಎಂದರು.

1875 ನ.15ರಂದು ಜಾರ್ಖಂರ್ಡ್ ಉಲಿಹಾತು ಎಂಬ ಗ್ರಾಮದಲ್ಲಿ ಬಿರ್ಸಾ ಮುಂಡಾ ಜನಿಸಿದರು. ಬ್ರಿಟಿಷರ ಅನ್ಯಾಯ ಮತ್ತು ಬುಡಕಟ್ಟು ಜನರ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಇವರ ಮುಖ್ಯ ಉದ್ದೇಶ ಆದಿವಾಸಿಗಳ ನೆಲ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದಾಗಿತ್ತು. ಕೇವಲ 25 ವರ್ಷ ಬದುಕಿದ್ದು, ತಮ್ಮ ಕಿರಿ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್, ನಗರಸಭೆ ಸದಸ್ಯ ಶಿವಲಿಂಗು ಇತರರಿದ್ದರು. ಇದೇ ಸಂದರ್ಭದಲ್ಲಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದಂತೆ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು. ನಂತರ ಬುಡಕಟ್ಟು ಜನಾಂಗದವರು ನೃತ್ಯ ಪ್ರದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net