ಆದಿವಾಸಿಗಳಿಂದ ಬಿರ್ಸಾ ಮುಂಡಾ ಜಯಂತಿ ಆಚರಣೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಂಟಳ್ಳಿಯ ಬಸವೇಶ್ವರ ಸನ್ನಿಧಿಯಲ್ಲಿ ಬಿರ್ಸಾ ಮುಂಡಾ ಜಯಂತಿ ಆಚರಿಸಲಾಯಿತು. ವಿಠಲ್, ಜಯಪ್ಪ, ಹರ್ಷ, ಭಾರತಿ,ಸಣ್ಣಮ್ಮ, ರಾಜು ಇದ್ದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಂಟಳ್ಳಿಯ ಬಸವೇಶ್ವರ ಸನ್ನಿಧಿಯಲ್ಲಿ ಬಿರ್ಸಾ ಮುಂಡಾ ಜಯಂತಿ ಆಚರಿಸಲಾಯಿತು. ವಿಠಲ್, ಜಯಪ್ಪ, ಹರ್ಷ, ಭಾರತಿ,ಸಣ್ಣಮ್ಮ, ರಾಜು ಇದ್ದರು.
Published on

 ಹುಣಸೂರು: ಆದಿವಾಸಿಗಳ ಕಣ್ಮಣಿ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 150ನೇ ಜಯಂತಿಯನ್ನು ವೀರನಹೊಸಳ್ಳಿ ವನ್ಯಜೀವಿ ವಲಯದ ಮಂಟಳ್ಳಿ ಕಾಡಿನಲ್ಲಿ ಆದಿವಾಸಿಗಳು ಆಚರಿಸುವ ಮೂಲಕ ತಮ್ಮ ನಾಯಕನಿಗೆ ಗೌರವ ಸಮರ್ಪಿಸಿದರು.

ನಂಗ ಕಾಡು ನಂಗ ಹಕ್ಕು ಎಂದು ತಮ್ಮ ಆದಿವಾಸಿ ಭಾಷೆಯಲ್ಲಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಮಂಟಳ್ಳಿ ಬಳಿಯ ಬಸವೇಶ್ವರ ದೇವಾಲಯ ಸನ್ನಿಧಿಯಲ್ಲಿ ಬಿರ್ಸಾಮುಂಡಾ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಆದಿವಾಸಿ ನಾಯಕ ಬಿರ್ಸಾ ಮುಂಡಾ ಬ್ರಿಟಿಷರ ಅರಣ್ಯ ಕಾನೂನನ್ನು ವಿರೋಧಿಸಿದ್ದರು. ಅರಣ್ಯಗಳು ಆದಿವಾಸಿ ಜನಸಮುದಾಯಗಳ ಆಶ್ರಯ ತಾಣಗಳೇ ಹೊರತು ಸರ್ಕಾರಿ ಸ್ವತ್ತಲ್ಲ ಎಂದು 1890ರಲ್ಲಿಯೇ ಅರಣ್ಯ ಹಕ್ಕು ರಕ್ಷಣೆಗೆ ಹಾಗೂ ಸ್ವಯಂ ನಿರ್ಣಯದ ಹಕ್ಕು ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ತೀವ್ರತರದ ಹೋರಾಟ ನಡೆಸಿದ್ದರು.7 ವರ್ಷಗಳಲ್ಲಿ ಅರಣ್ಯದಲ್ಲೇ ಆದಿವಾಸಿ ಸೈನ್ಯ ಕಟ್ಟಿ ಬ್ರಿಟಿಷರಿಗೆ ಸಿಂಹ ಸ್ವಪ್ನರಾದರು ಎಂದರು.

ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹೆಮ್ಮಿಗೆ ಹರ್ಷ ಮಾತನಾಡಿ, ತಿರಸ್ಕರಿಸಿರುವ ಅರಣ್ಯ ಹಕ್ಕು ಅರ್ಜಿಗಳನ್ನು ಮರು ಪರಿಗಣಿಸುವ ಮೂಲಕ ವೈಯಕ್ತಿಕ ಹಾಗೂ ಸಾಮೂಹಿಕ ಅರಣ್ಯ ಹಕ್ಕನ್ನು ಉಪವಿಭಾಗ ಹಾಗೂ ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳಾಗಿ ಮಾನ್ಯ ಮಾಡಬೇಕೆಂದು ಆಗ್ರಹಿಸಿದರು.

ಡೀಡ್ ಸಂಸ್ಥೆಯ ಶ್ರೀಕಾಂತ್ ಮಾತನಾಡಿ, ಬಿರ್ಸಾ ಮುಂಡಾ ಅವರು ಅರಣ್ಯ ಹಕ್ಕಿಗಾಗಿ ಅಂದು ಪ್ರಾರಂಭಿಸಿದ ಹೋರಾಟ ಇನ್ನೂ ನಡೆಯುತ್ತಿದೆ. ಅರಣ್ಯ ಕಾಯುವವರಿಗೆ ಸರ್ಕಾರ ಸಂಬಳ ಕೊಟ್ಟರೆ, ಅರಣ್ಯವು ಆದಿವಾಸಿಗಳಿಗೆ ಆಹಾರ, ಔಷದ ಹಾಗೂ ಬದುಕು ಕೊಡುತ್ತದೆ. ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಇದು ಸಾಧ್ಯ. ಅರಣ್ಯ ಇಲಾಖೆ ಈ ಮಹತ್ವದ ನಿರ್ಧಾರಕ್ಕೆ ಗಮನ ಕೊಡಬೇಕೆಂದರು.

ಕಾರ್ಯಕ್ರಮದಲ್ಲಿ ವಿಠಲ್ ನಾಣಾಚ್ಚಿ, ಲಕ್ಷ್ಮೀ, ಸಣ್ಣಯ್ಯ, ಭಾರತಿ, ರಾಜು, ಜೆ.ಟಿ.ರಾಜು, ಶಿವಣ್ಣ, ಅಣ್ಣಯ್ಯ, ವನವಾಸಿ ಕಲ್ಯಾಣದ ಮಣಿಕಂಠ, ಪ್ರಕಾಶ್ ಸೇರಿದಂತೆ ಹುಣಸೂರು ಮತ್ತು ಎಚ್.ಡಿ.ಕೋಟೆಯ ಆದಿವಾಸಿ ಗಿರಿಜನರು ಭಾಗವಹಿಸಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net