

ಚಿಕ್ಕೋಡಿ ಗ್ರಾಮೀಣ: ಯಕ್ಸಂಬಾ ಪಟ್ಟಣದ ಸುಪ್ರಸಿದ್ಧ ಶ್ರೀ ಬೀರೇಶ್ವರ ಜಾತ್ರೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಜೊಲ್ಲೆ ಗ್ರೂಪ್ ಸಮೂಹ ಸಂಸ್ಥೆ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಕುಟುಂಬ ವರ್ಗದೊಂದಿಗೆ ಗುರುವಾರ ಭೇಟಿ ನೀಡಿ ಶ್ರೀ ಬೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸಿದರು.
ಜೊಲ್ಲೆ ಗ್ರೂಪ್ ಸಮೂಹ ಸಂಸ್ಥೆ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಶ್ರೀ ಬೀರೇಶ್ವರ ಕೃಪೆಯಿಂದ ಬೆಳೆದ ಯಕ್ಸಂಬಾ ಗ್ರಾಮ ಹಾಗೂ ಜೊಲ್ಲೆ ಪರಿವಾರ ಸದಾ ಬೀರೇಶ್ವರ ಮಂದಿರದ ಜೀರ್ಣೋದ್ಧಾರಕ್ಕೆ ಬದ್ಧವಾಗಿದೆ. ಬೀರೇಶ್ವರ ಕೃಪೆ ಎಲ್ಲರ ಮೇಲಿರಲಿ ಎಂದು ಹರಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಬೀರೇಶ್ವರ ದರ್ಶನಕ್ಕಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ನಂಬಿ ಬಂದ
ಭಕ್ತರ ಬೇಡಿಕೆ ಸಾಕಾರಗೊಳಿಸುವ ದೇವರ ಮಹಿಮೆ ಅಪಾರವಾಗಿದೆ ಎಂದರು.
ಯುವ ಧುರೀಣ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಯಶಸ್ವಿನಿ ಜೊಲ್ಲೆ, ಜೊಲ್ಲೆ ಗ್ರೂಪ್‌ನ ಆಡಳಿತ ಮಂಡಳಿ ಸದಸ್ಯರು ಹಾಗೂ ಜಾತ್ರಾ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.